

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲಾದ್ಯಂತ ಎರಡು ದಿನ ಅಬ್ಬರಿಸಿದ್ದ ಮಳೆ, ಮಂಗಳವಾರ ದಿನವಿಡೀ ಮೌನ ವಹಿಸಿತ್ತು. ಬೇಸಿಗೆಯಲ್ಲಿ ಕಂಡುಬರುವಂತೆ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಪ್ರಖರ ಬಿಸಿಲು ಇತ್ತು.
ಸೋಮವಾರ ದಿನವಿಡೀ ಉಡುಪಿ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡ ಸ್ಥಿತಿಯಲ್ಲೇ ಇದ್ದವು. ಸೋಮವಾರ ರಾತ್ರಿ ಮಳೆ ಸುರಿಯದ್ದರಿಂದ ಕೃತಕ ನೆರೆ ಇಳಿದಿತ್ತು. ಜಲದಿಗ್ಬಂಧನಕ್ಕೊಳಗಾಗಿದ್ದ ಪ್ರದೇಶಗಳೆಲ್ಲವೂ ಈಗ ಮುಕ್ತವಾಗಿವೆ.
ಉಡುಪಿ ನಗರದ ತಗ್ಗು ಪ್ರದೇಶಗಳ ಜನರ ಬದುಕಿಗೆ ದಿನಪೂರ್ತಿ ನೀರು ಆವರಿಸಿತ್ತು. ಜನರು ತಮ್ಮ ಮನೆ ಹಾಗೂ ಅಂಗಡಿಯೊಳಗೆ ಆವರಿಸಿದ್ದ ನೀರನ್ನು ಹೊರ ಹಾಕಿ, ಸ್ವಚ್ಛ ಮಾಡಿಕೊಂಡರು. ಮಂಗಳವಾರ ಬಿಸಿಲು ಇತ್ತಾದರೂ ಸಂಜೆ 4 ಗಂಟೆಯ ವೇಳೆಗೆ ದಟ್ಟ ಮೋಡ ಆವರಿಸಿ ಮಳೆ ಸುರಿಯಲಾರಂಭಿಸಿತು. ಜು.13ರ ವರೆಗೂ ರೆಡ್ ಅರ್ಲಟ್ ಇರುವುದರಿಂದ ನಿರಂತರ ಮಳೆಯಾಗಿ ಮತ್ತೆಲ್ಲಿ ನೆರೆ ಬರುವುದೋ ಎಂಬ ದಿಗಿಲು ಜನರ ಮನದೊಳಗೆ ಆವರಿಸಿದೆ.
ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಗುಲಾಬಿ, ಕೋಟೇಶ್ವರದ ರಾಜು ನಾಯ್ಕ್, ತಲ್ಲೂರಿನ ಉದಯ್ ಚಿಕ್ಕ, ಕಾರ್ಕಳ ತಾಲೂಕಿನ ಬೋಳ ಗ್ರಾಮದ ಗೋಪಿ ಕೆ., ಹಿರ್ಗಾನದ ಸುಬ್ರಾಯ ಪ್ರಭು, ಮುಡಾರು ಗ್ರಾಮದ ಸುಜಾತಾಆರ್ ಶೆಟ್ಟಿ, ಬೈಂದೂರು ತಾಲೂಕಿನ ಕಂಬದಕೋಣೆಯ ಸುಬ್ಬಿ, ಉಡುಪಿ ತಾಲೂಕಿನ ಕೊರಂಗ್ರಪಾಡಿಯ ಮಧುಕರ್ ಬಿನ್ ತಿಮ್ಮಪ್ಪ ಬೆಲ್ಚಡ ಅವರ ಮನೆ ಭಾಗಶಃ ಹಾನಿಯಾಗಿದೆ.
ಕುಂದಾಪುರ ತಾಲೂಕಿನ ಹಾರ್ದಳ್ಳಿ ಮುಂಡಳ್ಳಿ ಗ್ರಾಮದ ಚಂದ್ರಕಲಾ ಅವರ ಭತ್ತದ ಗದ್ದೆಗೆ ನೀರು ನುಗ್ಗಿ ಹಾನಿಯಾಗಿದೆ. ಕಾವ್ರಾಡಿ ಗ್ರಾಮದ ದಿನೇಶ್ ನಾಯ್ಕ್, ಕೆರಾಡಿಯ ಗಿರಿಜಮ್ಮ ಶೆಡ್ತಿ, ಗುಜ್ಜಾಡಿಯ ಸೀತಾರಾಮ್ ಆಚರ್ಯಾ ಇವರ ಜಾನುವಾರು ಕೊಟ್ಟಿಗೆ ಭಾಗಶಃ ಹಾನಿಯಾಗಿದೆ.
ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯ ಗುಂಡಿಬೈಲು ಮತ್ತು ಬೈಲಕೆರೆ (ಶಿವಳ್ಳಿ ಮತ್ತು ಮೂಡನಿಡಂಬೂರು ಗ್ರಾಮ) ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದರಿಂದ 40 ಮಂದಿಯನ್ನು ಸ್ಥಳಾಂತರ ಮಾಡಲಾಗಿತ್ತು. ಅದರಲ್ಲಿ 30 ಮಂದಿಯನ್ನು ಉಡುಪಿಯ ಮಥುರಾ ಛತ್ರ ಎಂಬ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಉಳಿದ 10 ಮಂದಿ ಸಂಬಂಧಿಕರ ಮನೆಗೆ ತೆರಳಿರುತ್ತಾರೆ. ಮಂಗಳವಾರ ಬೆಳಗ್ಗೆ ಮಳೆ ನಿಂತ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗೆ ಹಿಂತಿರುಗಿದ್ದಾರೆ.
ಕಾರ್ಕಳ- 78.02 ಮಿ.ಮೀ., ಕುಂದಾಪುರ- 53.08, ಉಡುಪಿ& 83.01, ಬೈಂದೂರು- 55.01, ಬ್ರಹ್ಮಾವರ- 74.04, ಕಾಪು- 98.08 ಹಾಗೂ ಹೆಬ್ರಿ ತಾಲೂಕಿನಲ್ಲಿ 55.01 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ತಾಲೂಕುಗಳ ಮಳೆಯ ಸರಾಸರಿ 66.07 ಮಿ.ಮೀ. ಇತ್ತು.
ಉಡುಪಿ ನಗರದ ಚರಂಡಿಗಳು ಸುವ್ಯವಸ್ಥಿತವಾಗಿಲ್ಲ ಎನ್ನುವುದನ್ನು ಎರಡು ದಿನ ಸುರಿದ ಮಳೆಯಿಂದ ಉಂಟಾಗಿದ್ದ ನೆರೆ ತೋರ್ಪಡಿಸಿತ್ತು. ಸೋಮವಾರ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನದ ವರೆಗೂ ಬಿರು ಬಿಸಿಲಿದ್ದರೂ ಸಹ ಅನೇಕ ಕಡೆಗಳ ಚರಂಡಿಯಲ್ಲಿ ಮಳೆ ನೀರು ಹರಿದು ಹೋಗದೇ ಅಲ್ಲೇ ನಿಂತಿರುವುದು ಕಂಡುಬಂತು. ವಿವಿಧೆಡೆ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಸ-ಕಡ್ಡಿ ಕಟ್ಟಿಕೊಂಡಿದ್ದು, ಮಳೆ ನೀರು ಸರಾಗವಾಗಿ ಹರಿದು ರಾಜಕಾಲುವೆ ಸೇರುತ್ತಿಲ್ಲ. ಮತ್ತೆ ಮಳೆ ಹೆಚ್ಚಾದಲ್ಲಿ ಚರಂಡಿಯಲ್ಲಿ ನೀರು ಸಾಗದೆ, ಆ ಭಾಗದಲ್ಲಿ ಕೃತಕ ನೆರೆ ಉಂಟಾಗುತ್ತದೆ. ಹೀಗಾಗಿ ನಗರಸಭೆಯವರು ಚರಂಡಿ ಸ್ವಚ್ಛಪಡಿಸಿ ಮುಂದಾಗಲಿರುವ ಅಪಾಯ ತಡೆಯಬೇಕು ಎಂದು ನೆರೆಯಿಂದ ಸಮಸ್ಯೆ ಅನುಭವಿಸಿದ ನಿಟ್ಟೂರು ಮಾರ್ಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.