

ಹೊಸಪೇಟೆ: ಕಳೆದ ಮೂರು ವರ್ಷದಿಂದ ರಾಜ್ಯ ಬಜೆಟ್ ಮೇಲಿನ ವಿಜಯನಗರ ಜಿಲ್ಲೆ ಜನರ ನಿರೀಕ್ಷೆಗಳು ನಿರಂತರವಾಗಿ ಹುಸಿಯಾಗುತ್ತಿವೆ. ಈ ಸರ್ಕಾರದಲ್ಲಿ ಜಿಲ್ಲೆಯ ಹಣೆಬರಹ ಬದಲಾಗುವುದಿಲ್ಲ ಎಂಬ ಹತಾಶೆಯ ನುಡಿಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ರಾಜ್ಯ ಬಜೆಟ್ ಸತ್ವಹೀನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಜಿಲ್ಲೆಗೆ ಈ ಬಾರಿ ಬಜೆಟ್‌ನಲ್ಲಿ ವಿಶೇಷ ಅನುದಾನ ತರುತ್ತಾರೆಂಬ ನಿರೀಕ್ಷೆ, ಭರವಸೆ ಸುಳ್ಳಾಗಿದೆ. ಇಬ್ಬರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ತಲಾ ಒಬ್ಬ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಗೆ ಹೊಸ ಯೋಜನೆಗಳು ಹಾಗೂ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ, ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಿಸಲು ಹೊಸಪೇಟೆಯಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮರಾ ಅಳವಡಿಕೆಗೆ ಸರ್ಕಾರ ಮುಂದಾಗಿದೆ. ಆದರೆ, ಹಂಪಿ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿಲ್ಲ. ರೈತರ ಪ್ರಮುಖ ಬೇಡಿಕೆಯಾದ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ, ಆರ್ಥಿಕ ಸಂಕಷ್ಟದಲ್ಲಿರುವ ಕನ್ನಡ ವಿವಿಗೆ ಅನುದಾನ, ಮೆಡಿಕಲ್ ಕಾಲೇಜು ನಿರ್ಮಾಣ ಸೇರಿದಂತೆ ಹಲವು ನಿರೀಕ್ಷೆಗಳು ಹುಸಿಯಾಗಿವೆ.
ಹರಪನಹಳ್ಳಿಗೆ ಹಲುವಾಗಲು ಗ್ರಾಮದಿಂದ ಕೂಡಿವ ನೀರು ಪೂರೈಕೆ ಹಾಗೂ ನೀರಾವರಿ ಯೋಜನೆಗೆ ಈ ಹಿಂದಿನ ಸರ್ಕಾರ ಮೀಸಲಿಟ್ಟಿದ್ದ ಅನುದಾನ ಈ ಬಜೆಟ್‌ನಲ್ಲಿಯೂ ಈಡೇರಲಿಲ್ಲ. ಹೂವಿನಹಡಗಲಿ ಮೈಲಾರ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಭರವಸೆ ಸಾಕಾರಗೊಂಡಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದಾಗ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸತ್ರೆ, ಸಕ್ಕರೆ ಕಾರ್ಖಾನೆ ಆರಂಭ, ಕನ್ನಡ ವಿವಿಗೆ ಅನುದಾನ ನೀಡಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದ್ದರು. ಆದರೆ, ಹೇಳಿಕೊಳ್ಳುವಂತಹ ಯೋಜನೆಯನ್ನು ತರಲು ಸಾಧ್ಯವಾಗದಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.