

ರಾಯಚೂರು: ಆಧ್ಯಾತ್ಮಿಕತೆ ಜಾತಿಬೇಧ ಸೇರಿದಂತೆ ಎಲ್ಲ ಬೇಧಭಾವಗಳನ್ನು ಅಳಿಸಿ, ದುರ್ಗುಣಗಳನ್ನು ಹೋಗಲಾಡಿಸಿ ಸಮಭಾವದೊಂದಿಗೆ ಬದುಕು ಸಾಮರ್ಥ್ಯವನ್ನು ತುಂಬುತ್ತದೆ ಎಂದು ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಮುಖ್ಯಸ್ಥೆ ಸ್ಮೀತಾ ಅಕ್ಕ ಹೇಳಿದರು.
ಸ್ಥಳೀಯ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಮತ್ತು ರಾಷ್ಟ್ರೀಯ ವಕೀಲರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಈ ನಿಟ್ಟಿನಲ್ಲಿ ವಿದ್ಯಾಲಯ ಸ್ವ ಪರಿವರ್ತನೆ ಮೂಲಕ ವಿಶ್ವ ಪರಿವರ್ತನೆ ಧ್ಯೇಯದೊಂದಿಗೆ ಜನರಿಗೆ ಆಧ್ಯಾತ್ಮಿಕ ಜ್ಞಾನ ನೀಡುವ ಕೆಲಸ ಮಾಡುತ್ತಿದೆ ಎಂದರು.
ಸಮಾಜದಲ್ಲ ಬದುಕುವ ಪ್ರತಿಯೊಬ್ಬರು ನ್ಯಾಯ, ನೀತಿಯಿಂದ ಬದುಕಿದಾಗ ಸಮಾಜ ವ್ಯವಸ್ಥಿತವಾಗಿರುತ್ತದೆ. ಕೇವಲ ಹಕ್ಕುಗಳನ್ನು ಕೇಳುವುದಲ್ಲ, ಕರ್ತವ್ಯಗಳನ್ನು ಕೂಡಾ ಜವಾಬ್ದಾರಿಯಿಂದ ನಿರ್ವಹಿಸಿದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ನಾಗರಾಜ ಮಸ್ಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಕಾರಾತ್ಮಕ ಜೀವನದ ಮೂಲಕ ಬದುಕು ಕಲೆಯನ್ನು ನಾವು ರೂಢಿಸಿಕೊಳ್ಳಬೇಕು. ವೃತ್ತಿ ಗೌರವ ಕಾಪಾಡುವುದರ ಜತೆಗೆ ನ್ಯಾಯಾಂಗ ವ್ಯವಸ್ಥೆಯ ಮಹತ್ವವನ್ನು ಅರಿತುಕೊಂಡು ಮತ್ತೊಬ್ಬರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಹಿರಿಯ ನ್ಯಾಯವಾದಿ ಕೆ.ದೇವಣ್ಣ ನಾಯಕ ಮಾತನಾಡಿ, ಈಶ್ವರಿಯ ವಿದ್ಯಾಲಯದಂತಹ ಆಧ್ಯಾತ್ಮಿಕ ಕೇಂದ್ರಗಳು ಜನರಲ್ಲಿ ಸ್ವಯಂ ಶಿಸ್ತು ರೂಪಿಸಿ ಜಾಗೃತಿ ಸಮಾಜ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಶ್ರೀಕಾಂತರಾವ್, ನೀಲಕಂಠರಾವ್, ಸಿ.ಬಿ.ಪಾಟೀಲ್, ಬಿ.ಎನ್.ನಾಯಕ, ಉದಯಕುಮಾರ ಮಲ್ದಿ, ಕೆ.ಮಲ್ಲಿಕಾರ್ಜುನ, ಅಶೋಕ ಕೊಂಡಾ, ಎಸ್.ಜಿ.ಮಠ ಉಪಸ್ಥಿತರಿದ್ದರು.