

ಸಿರಗುಪ್ಪ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಜೀವನದ ಮೌಲ್ಯಗಳು ಸ್ತ್ರೀಕುಲಕ್ಕೆ ಮಾದರಿ ಎಂದು ಶ್ರೀಗುರು ಬಸವ ಮಹಾಮಠದ ಬಸವಭೂಷಣ ಸ್ವಾಮೀಜಿ ತಿಳಿಸಿದರು.
ತಾಲೂಕಿನ ನಾಗರಹಾಳು ಗ್ರಾಮದ ಬೃಹನ್ಮಠದಲ್ಲಿ ಶರಣ ದೊಡ್ಡಯ್ಯಶಾಸ್ತ್ರಿ, ಬಸವಮ್ಮ ಅವರ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮಾಂಬೆ ಜೀವನದರ್ಶನ ಪುರಾಣ ಪ್ರವಚನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅರ್ಥಪೂರ್ಣ ಬದುಕು ಸಾಗಿಸಿದ ಮಲ್ಲಮ್ಮನ ವಿಚಾರಧಾರೆಗಳು ಮನೆ-ಮನಕ್ಕೆ ತಲುಪುವಂತಾಗಬೇಕು ಎಂದರು.
ಶ್ರೀಮಠದ ಬಸವರಾಜಯ್ಯ ತಾತನವರು ಮಾತನಾಡಿ, ಏ.26ರಂದು ದೊಡ್ಡಯ್ಯ ಶಾಸ್ತ್ರಿಗಳ, ಬಸವಮ್ಮ ಅವರ ಪುಣ್ಯಸ್ಮರಣೆ ಅಂಗವಾಗಿ ಕರ್ತೃ ಗದ್ದುಗೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಉಚಿತ ಸಾಮೂಹಿಕ ವಿವಾಹಗಳು, ಮಹಾರಥೋತ್ಸವ ಜರುಗಲಿದೆ ಎಂದು ತಿಳಿಸಿದರು.
ಗಡಿನಾಡ ಕನ್ನಡ ಸಾಹಿತಿ ನಾ.ಮ. ಮರುಳಾರಾಧ್ಯರ ಪುರಾಣ ಪ್ರವಚನಕ್ಕೆ ಎನ್.ಎಂ. ಜಗದೀಶ ಗವಾಯಿ ಪುರಾಣ ವಾಚನ ಮತ್ತು ಹಾರ್ಮೋನಿಯಂ, ಶಾಂತವೀರಯ್ಯಸ್ವಾಮಿ ದಿಲ್ರುಬಾ, ಅದವಾನಿ ಸಂತೋಷಕುಮಾರ್ ತಬಲ ಸಾಥ್ ನೀಡಿದರು. ಶ್ರೀಶರಣ ದೊಡ್ಡಯ್ಯತಾತನವರ ಶಿವಾನುಭವ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಶ್ರೀಮಠದ ಭಕ್ತರು ಭಾಗವಹಿಸಿದ್ದರು.