

ಸಿಂದಗಿ: ಪಟ್ಟಣದ ಪ್ರಮುಖ ರಸ್ತೆಗಳ ಅತಿಕ್ರಮಣ ತೆರವುಗೊಳಿಸಲು ತಡೆಯೊಡ್ಡುತ್ತಿರುವ ಬಿಜೆಪಿಗರ ಹೋರಾಟ ನೈತಿಕವಾಗಿದೆಯೇ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಪ್ರಶ್ನಿಸಿದರು.
ಪುರಸಭೆಯ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ವೃತ್ತ, ಬಸ್ ನಿಲ್ದಾಣದ ಮುಂದಿನ ಹಾಗೂ ಪಕ್ಕದ ರಸ್ತೆಗಳಲ್ಲಿ ಕೆಲವು ಅಂಗಡಿಕಾರರು ಸ್ವಯಂಪ್ರೇರಿತವಾಗಿ ಅತಿಕ್ರಮಣ ತೆರವುಗೊಳಿಸಿದ್ದಾರೆ. ಕೆಲವರ ಶೆಡ್‌ಗಳನ್ನು ಪುರಸಭೆಯೇ ತೆರವುಗೊಳಿಸಿದೆ. ಆದರೆ ಇವರೆಲ್ಲರ ಪರವಾಗಿ ಅಂದೇ ಧ್ವನಿ ಎತ್ತಬೇಕಿದ್ದ ಬಿಜೆಪಿಗರು ಕೇವಲ ಬಸವೇಶ್ವರ ವೃತ್ತದಲ್ಲಿನ ಶೆಡ್‌ಗಳನ್ನು ತೆರವುಗೊಳಿಸದಂತೆ ಹೋರಾಟ ನಡೆಸಿರುವುದನ್ನು ಖಂಡಿಸುವೆ. ಅಲ್ಲದೆ ಕೆಲವರು ಅತಿಕ್ರಮಿಸಿ ಶೆಡ್‌ಗಳನ್ನು ಇಟ್ಟು ಬಾಡಿಗೆ ಪಡೆಯುತ್ತಿದ್ದಾರೆ. ಇದು ನ್ಯಾಯವೇ ಎಂದರು.
ಈ ಶೆಡ್‌ಗಳನ್ನು ತೆರವುಗೊಳಿಸಿ, ೆವರ್ಸ್ ಹಾಕಿ ಸಾರ್ವಜನಿಕರಿಗೆ ಮುಕ್ತ ಸಂಚಾರ ಮತ್ತು ಆಸನಗಳನ್ನು ಹಾಕಿ ನಗರದ ರಸ್ತೆಗಳನ್ನು ಸುಂದರಗೊಳಿಸಲು ಪುರಸಭೆ ಸಿದ್ಧವಾಗಿದೆ. ಈ ದಿಸೆಯಲ್ಲಿ ಬಹುತೇಕ ಪ್ರಜ್ಞಾವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರ ಜತೆಗೆ ಈಗಾಗಲೇ ನಗರದಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ರಸ್ತೆ ಮೇಲಿರುವ ಖಾಸಗಿ ವ್ಯಕ್ತಿಗಳ ಆಸ್ತಿ ದಾಖಲೆಗಳನ್ನು ಪುರಸಭೆಗೆ ಸಲ್ಲಿಸಲು ನೋಟಿಸ್ ನೀಡಲಾಗುತ್ತಿದೆ. ದಾಖಲೆ ಸಲ್ಲಿಸದವರ ಅತಿಕ್ರಮಣವನ್ನು ಎಷ್ಟೇ ಪ್ರಭಾವಿಗಳಿದ್ದರೂ ತೆರವು ಕಾರ್ಯ ನಡೆಸಲಾಗುವುದು ಎಂದು ಹೇಳಿದರು.
ಬಸವೇಶ್ವರ ವೃತ್ತದಲ್ಲಿನ ಶೆಡ್‌ಗಳನ್ನು ತೆರವುಗೊಳಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಅ.26 ರಂದು ಶೆಡ್ ತೆರವು ಕಾರ್ಯಾಚರಣೆ ನಡೆಯಲಿದೆ. ತೆರವಿಗೆ ಅಡ್ಡಿಪಡಿಸುತ್ತಿರುವ ಹೋರಾಟಗಾರರಿಗೆ ಜಿಲ್ಲಾಧಿಕಾರಿ ಮೌಖಿಕವಾಗಿ ತಿಳಿಸಿರಬಹುದು. ಆದರೆ ಅವರ ಆದೇಶವಿದ್ದರೆ ಪುರಸಭೆಗೆ ನೀಡಲಿ. ಅವರ ಆದೇಶದಂತೆ ಕ್ರಮ ವಹಿಸಲಾಗುವುದು ಎಂದರು.
ಪುರಸಭೆ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ ಮತ್ತಿತರರಿದ್ದರು.
ಬಿಜೆಪಿಯಿಂದ ಸತ್ಯಾಗ್ರಹ ಎಚ್ಚರಿಕೆ
ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯ ಶೆಡ್ ತೆರವು ಕಾರ್ಯಾಚರಣೆ ಕೈಬಿಡುವಂತೆ ಆಗ್ರಹಿಸಿ ಶುಕ್ರವಾರ ಬೀದಿಬದಿ ವ್ಯಾಪಾರಿಗಳು ಹಾಗೂ ಬಿಜೆಪಿ ಮಂಡಲ ಕಾರ್ಯಕರ್ತರು ಜಂಟಿಯಾಗಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ರಮೇಶ ಭೂಸನೂರ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಮತ್ತಿತರರು ಮಾತನಾಡಿ, ಈ ಶೆಡ್‌ಗಳಲ್ಲಿನ ವ್ಯಾಪಾರಿಗಳು ಬಡ ಕುಟುಂಬದವರಾಗಿದ್ದು, ತೆರವು ಕಾರ್ಯಾಚರಣೆ ಮೂಲಕ ಅವರ ಹೊಟ್ಟೆ ಮೇಲೆ ಬರೆ ಹಾಕಬಾರದು. ಒಂದು ವೇಳೆ ತೆರವು ಮಾಡುವುದೇ ಆದಲ್ಲಿ ಅವರಿಗೆ ಬದಲಿ ಜಾಗ ಒದಗಿಸಬೇಕು. ಇಲ್ಲದಿದ್ದಲ್ಲಿ ನಗರದಲ್ಲಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದರು. ಶಿವಕುಮಾರ ಬಿರಾದಾರ, ಸೋಮು ಕೊಪ್ಪ, ಸತೀಶ ದೇವರನಾವದಗಿ, ಯಜಾನ್ ಮಾಲಗಾಂವಕರ, ದತ್ತು ನಾಲ್ಕಮನ, ಪ್ರಭು ಕಂಬಾರ, ಶಕೀಲ ವಾಲಿಕಾರ, ತಾರಾಬಿ ಗುಂದಗಿ, ಸಾಹೇರ ಗೊಳಸಾರ, ಬಿಸ್ಮಿಲ್ಲಾ ಬಾಗವಾನ, ಅಂಜುಮಾ ಬಾಗವಾನ ಇತರರಿದ್ದರು.