

ಕಾರಟಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಡಾ.ಅಶ್ವತ್ಥ ನಾರಾಯಣರನ್ನು ಸಂಪುಟದಿಂದ ಕೈಬಿಡುವುದು ಹಾಗೂ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್, ಪ್ರಗತಿಪರ ರೈತರು, ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಮಂಗಳವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದಡಿ ಅಧಿಕಾರ ನಡೆಸುವ ಜತೆಗೆ ನುಡಿದಂತೆ ನಡೆದಿದ್ದಾರೆ. ರಾಜ್ಯದ ಬಡಜನರ ಹಸಿವು ನೀಗಿಸಿದ್ದಾರೆ. ಶಿಕ್ಷಣ, ಕೃಷಿ, ರಸ್ತೆ ಸೇರಿದಂತೆ ಅನೇಕ ಜನೋಪಯೋಗಿ ಕೊಡುಗೆಗಳನ್ನು ನೀಡಿದ್ದಾರೆ. ಅವರನ್ನು ನೇರವಾಗಿ ಎದುರಿಸಲಾಗದ ಬಿಜೆಪಿಯ ನಾಯಕರು ಧರ್ಮ ಮತ್ತು ಜಾತಿ ಹಿನ್ನಲೆಯನ್ನಿಟ್ಟುಕೊಂಡು ಸಿದ್ದರಾಮಯ್ಯರನ್ನು ಕೊಲೆ ಮಾಡುವಂತೆ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಕೀಳು ಮಟ್ಟದ ರಾಜಕೀಯ ನಡೆಸುತ್ತಿದ್ದಾರೆ. ಸೋಲಿನ ಹತಾಶೆಯಿಂದ ಬಿಜೆಪಿ ಜನರ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಇದಾವುದು ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಜನ ತಕ್ಕ ಪಾಠ ಕಲಿಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡಲೇ ಡಾ.ಅಶ್ವತ್ಥ ನಾರಾಯಣನನ್ನು ಸಂಪುಟದಿಂದ ವಜಾಗೊಳಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ತಹಸೀಲ್ದಾರ್ ಎಂ.ಬಸವರಾಜಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಉದಯ ಈಡಿಗೇರ್, ಅಮರೇಶ್ ತಳವಾರ, ದೇವಪ್ಪ ಭಾವಿಕಟ್ಟೆ, ಶರಣಪ್ಪ ಪರಕಿ ಇತರರಿದ್ದರು.