

ಹೊಸನಗರ: ಪಟ್ಟಣದ ಅಖಿಲ ಭಾರತ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಶೋಭಾಯಾತ್ರೆ ವಿಜೃಂಭಣೆಯಿಂದ ನೆರವೇರಿತು. ಪಟ್ಟಣದ ಅಂಚೆ ಕಚೇರಿ ಸಮೀಪದ ವೀರ ಸಾವರ್ಕರ್ ಮಂಟಪದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಹೊಸನಗರ ಘಟಕದಿಂದ ಪ್ರತಿಷ್ಠಾಪಿಸಿದ್ದ 8ನೇ ವಷರ್ದ ಗಣೇಶ ಮೂರ್ತಿಗೆ ಸೋಮವಾರ ಸಂಜೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಆರಂಭವಾದ ಶೋಭಾಯಾತ್ರೆ ದ್ಯಾವರ್ಸ, ನೆಹರು ರಸ್ತೆ, ಕೋರ್ಟ್ ಸರ್ಕಲ್, ಚೌಡಮ್ಮ ರಸ್ತೆ, ಕಾಳಿಕಾಪುರ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಚಂಡೆ ವಿವಿಧ ಬಗೆಯ ಗೊಂಬೆಗಳು, ಆಕಷರ್ಕ ಸ್ತಬ್ಧ ಮೂರ್ತಿಗಳ ಪ್ರದರ್ಶನವಿತ್ತು. ಇಡೀ ಹೊಸನಗರ ಪಟ್ಟಣ ಕೇಸರಿ ಧ್ವಜಗಳಿಂದ ರಾರಾಜಿಸುತ್ತಿತ್ತು. ಯುವಕರು ಮತ್ತು ಮಹಿಳೆಯರು ಡಿಜೆ ಹಾಗೂ ಮಂಗಳ ವಾದ್ಯಗಳೊಂದಿಗೆ ಉತ್ಸಾಹದಿಂದ ಹೆಜ್ಜೆ ಹಾಕಿದರು. ಸತತ ಹದಿನಾಲ್ಕು ಗಂಟೆಗಳ ಕಾಲ ಸಾಗಿದ ಮೆರವಣಿಗೆಯು ಮಂಗಳವಾರ ಮುಂಜಾನೆ ಗಣಪತಿ ದೇವಸ್ಥಾನದ ಪುಷ್ಕರಣಿ ತಲುಪಿತು. ಧಾರ್ಮಿಕ ವಿಧಿವಿಧಾನಗಳ ಬಳಿಕ ಭಕ್ತರ ಜಯಘೋಷಗಳೊಂದಿಗೆ ಮಹಾಗಣಪತಿ ಮೂರ್ತಿಯನ್ನು ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.
ವಿಸರ್ಜನಾ ಕಾರ್ಯಕ್ರಮಕ್ಕೆ ಹಿಂದೂ ಮಹಾಸಭಾ ಕೆ.ಎಸ್.ವಿನಾಯಕ ಶ್ರೇಷ್ಠಿ, ಗಣೇಶ ಮಧುಕರ್, ಅನೂಪ್ ಅರವಿಂದ್, ಪ್ರಮುಖರಾದ ಕೆ.ಎಸ್.ಪ್ರಶಾಂತ್ ಸಾಗರ, ಸುರೇಶ ಸ್ವಾಮಿರಾವ್, ಹಾಲಗದ್ದೆ ಉಮೇಶ್, ಎನ್.ಆರ್.ದೇವಾನಂದ್ ಪರಿವಾರದ ಪ್ರಮುಖರು, ಮಹಾಸಭಾದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.