

ಶಿವಮೊಗ್ಗ: ನಶಿಸುತ್ತಿರುವ ಜಾನಪದ ಕಲೆಗಳಿಗೆ ವೇದಿಕೆ ಕಲ್ಪಿಸುವುದರ ಜತೆಗೆ ದೀವರ ಸಮುದಾಯದ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಕಲಾ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಡೆದ ದೀವರ ಸಂಸ್ಕೃತಿ ಸಂಗಮ ಗಮನ ಸೆಳೆಯಿತು.
ನಗರದ ಈಡಿಗರ ಭವನದಲ್ಲಿ ಮಂಗಳವಾರ ಶಿವಮೊಗ್ಗದ ದೀವರ ಕ್ಷೇಮಾಭಿವೃದ್ಧಿ ಸಂಘದಿಂದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ದೀವರ ಕಲೆಗಳ ಸ್ಪರ್ಧೆ, ಸಾಧಕರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಮುದಾಯದ ಸಾಂಸ್ಕೃತಿಕ ವೈವಿಧ್ಯ ಅನಾವರಣಗೊಂಡಿತು.
ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಕೋಲಾಟ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಲಯಬದ್ಧ ಹೆಜ್ಜೆ, ಕೋಲುಗಳ ಝೇಂಕಾರ ಹಾಗೂ ಸಾಮೂಹಿಕ ನೃತ್ಯದ ಮೂಲಕ ಜನಪದ ಕಲೆಯ ಸೊಬಗನ್ನು ಮೆರೆದರು. ಮಹಿಳೆಯರೇ ಡೊಳ್ಳು ಬಾರಿಸುವ ಮೂಲಕ ವಾದ್ಯ ಕಲೆಯಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಪುರುಷರ ಡೊಳ್ಳು ಕುಣಿತ ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸಿತು. ಸಾಂಪ್ರದಾಯಿಕ ಉಡುಗೆ, ಬಣ್ಣಬಣ್ಣದ ಅಲಂಕಾರ ಹಾಗೂ ತಾಳಬದ್ಧ ಹೆಜ್ಜೆಗಳೊಂದಿಗೆ ಕಲಾವಿದರು ಪ್ರದರ್ಶಿಸಿದ ಡೊಳ್ಳು ಕುಣಿತ ಸಾಂಸ್ಕೃತಿಕ ವೈಭವಕ್ಕೆ ಮೆರುಗು ನೀಡಿತು. ಅಂಟಿಗೆ-ಪಿಂಟಿಗೆ ಕಲಾ ಪ್ರದರ್ಶನದಲ್ಲಿ ಗ್ರಾಮೀಣ ಬದುಕಿನ ಸೊಗಡು ಮತ್ತು ಜನಪದ ಪರಂಪರೆಯ ಅಭಿವ್ಯಕ್ತಿ ಮೂಡಿಬಂತು. ಜನಪದ ಹಾಡುಗಳ ವೃಂದಗಾನ ಸ್ಪರ್ಧೆ ಕಾರ್ಯಕ್ರಮಕ್ಕೆ ಸಂಗೀತದ ಮೆರುಗು ನೀಡಿತು.
ದೀವರ ಸಮುದಾಯದ ಆಚರಣೆ, ಸಂಪ್ರದಾಯ, ಉಡುಗೆ-ತೊಡುಗೆ ಹಾಗೂ ಜನಪದ ಕಲಾ ಪ್ರಕಾರಗಳನ್ನು ಪ್ರತಿಬಿಂಬಿಸುವ ಪ್ರದರ್ಶನಗಳು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಯನ್ನು ಸಾರಿದವು. ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಪಾಲ್ಗೊಂಡು ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಅದರಲ್ಲೂ ದೀವರ ಹಸೆ ಚಿತ್ತಾರ ಆಕರ್ಷಕವಾಗಿತ್ತು.
ಸಾಧಕರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಒಟ್ಟಾರೆ ಸಮುದಾಯದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಆಶಯದೊಂದಿಗೆ ನಡೆದ ಕಾರ್ಯಕ್ರಮ ದೀವರ ಸಂಸ್ಕೃತಿಯ ಸಾಮೂಹಿಕ ಅನಾವರಣಕ್ಕೆ ಸಾಕ್ಷಿಯಾಯಿತು.
ದೀವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಕುಪ್ಪಯ್ಯ ದೊಣಂದೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಜಿ.ಡಿ.ನಾರಾಯಣಪ್ಪ, ಸಂಘದ ಗೌರವಾಧ್ಯಕ್ಷ ಎಚ್.ನಾಗರಾಜ್ ಹಾಗೂ ಶ್ರೀನಿವಾಸ್ ಜಿ. ನಾಯ್ಕ ಮುಖ್ಯ ಅತಿಥಿಗಳಾಗಿದ್ದರು.