

ಶಿವಮೊಗ್ಗ: ನ್ಯಾಯಾಲಯದ ಹೊರಗೆ ಕಡಿಮೆ ವೆಚ್ಚ ಮತ್ತು ಕಡಿಮೆ ಸಮಯದಲ್ಲಿ ಪರಸ್ಪರ ಒಪ್ಪಿಗೆಯ ಪರಿಹಾರ ಕಂಡುಕೊಳ್ಳಲು ನೆರವಾಗುವ ಅನುಸಂಧಾನ ಪ್ರಕ್ರಿಯೆ, ಸಂಘರ್ಷಕ್ಕಿಂತ ಸಮನ್ವಯಕ್ಕೆ ಆದ್ಯತೆ ನೀಡಲಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರವಿ ವಿ. ಹೊಸಮನಿ ಅಭಿಪ್ರಾಯಪಟ್ಟರು.
ನಗರದ ಸಿ. ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಯುವ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ಶನಿವಾರ ಮೂರು ದಿನಗಳ ರಾಜ್ಯಮಟ್ಟದ ದ್ವಿತೀಯ ಅನುಸಂಧಾನ ಸ್ಪರ್ಧೆ-2026ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅನುಸಂಧಾನ ಎಂದರೆ ಕೇವಲ ವಿವಾದವೊಂದನ್ನು ಅಂತ್ಯಗೊಳಿಸುವುದಲ್ಲ. ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಯುವ ಪ್ರಕ್ರಿಯೆಯೂ ಹೌದು. ವಕೀಲರು ತಮ್ಮ ಕಕ್ಷಿದಾರರ ಉದ್ದೇಶಗಳನ್ನು ಸ್ಪಷ್ಟವಾಗಿ ಅರಿತು, ಅನುಸಂಧಾನಕ್ಕೆ ಮುನ್ನ ಸೂಕ್ತ ಸಿದ್ಧತೆನಡೆಸಬೇಕು. ಸಮಸ್ಯೆಯ ಪರಿಹಾರಕ್ಕೆ ಇರುವ ಉತ್ತಮ ಹಾಗೂ ಪರ್ಯಾಯ ಮಾರ್ಗಗಳನ್ನು ವಿಶ್ಲೇಷಿಸಬೇಕು. ಪರಸ್ಪರ ಸ್ವತಂತ್ರ, ಒಪ್ಪಿಗೆ ಅನುಸಂಧಾನದ ಪ್ರಮುಖ ಅಂಶವಾಗಿದೆ. ಆತುರಕ್ಕಿಂತ ತಾಳ್ಮೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನ್ಯಾಯಾಲಯ ಎಂದಾಕ್ಷಣ ವಾದ-ಪ್ರತಿವಾದಗಳು ನೆನಪಾಗುತ್ತವೆ. ಆದರೆ ಬದಲಾಗುತ್ತಿರುವ ಜಾಗತಿಕ ವ್ಯವಹಾರಿಕ ಪರಿಸರದಲ್ಲಿ ಯಾರೂ ಸಂಪೂರ್ಣ ಸೋಲಿನೊಂದಿಗೆ ಹೊರಬರಲು ಬಯಸುವುದಿಲ್ಲ. ಕಾನೂನು ಪ್ರಕ್ರಿಯೆಯಲ್ಲಿ ಕಾರ್ಯವಿಧಾನದ ಹಕ್ಕುಗಳು ಅಗತ್ಯವಾದರೂ, ಅದೇ ಪ್ರಕ್ರಿಯೆ ಶಿಕ್ಷೆಯಾಗಿ ಪರಿಣಮಿಸಿದಾಗ ಅವುಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಸೇತುವೆಯಾಗಿ ಅನುಸಂಧಾನ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ನೈತಿಕತೆ, ಸಹಾನುಭೂತಿ ಮತ್ತು ಪೂರ್ವಸಿದ್ಧತೆಯ ಅರಿವು ಅಗತ್ಯ. ಸಮಸ್ಯೆಯನ್ನು ಮತ್ತಷ್ಟು ಬೆಳೆಸುವುದಕ್ಕಿಂತ ಪರಿಹಾರದತ್ತ ಕೊಂಡೊಯ್ಯುವ ಮನೋಭಾವ ಕಾನೂನು ಪದವೀಧರರಲ್ಲಿ ಬೆಳೆಯಬೇಕು. ಪ್ರತಿಯೊಬ್ಬರಿಗೂ ನೀತಿಯುತ ನ್ಯಾಯ ದೊರೆಯುವಂತಾಗಬೇಕು ಎಂದರು.
ಕಾಲೇಜಿನ ಪ್ರಾಚಾರ್ಯೆ ಡಾ. ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ನಿರ್ದೇಶಕ ಎಂ.ಎಸ್.ಅನಂತದತ್ತ, ಗೋವಾದ ವಿ.ಎಂ.ಸಲಗಾಂವ್ಕರ್ ಕಾನೂನು ಕಾಲೇಜಿನ ಉಪಪ್ರಾಚಾರ್ಯ ಡಾ. ಬಿ.ಎಸ್. ಪಾಟೀಲ್, ಭರತ್ ಕುಮಾರ್ ಮೆಹ್ತಾ, ವಕೀಲ ಜಿ.ಮಧುಸೂದನ್, ಐಕ್ಯೂಎಸಿ ಸಂಯೋಜಕ ಡಾ. ಕಾಂತರಾಜ್, ಸಂಯೋಜಕರಾದ ಎಚ್.ಸೌಮ್ಯಾ, ಮೇಘ ವಿಜಯ್ ಇದ್ದರು.
ರಾಜ್ಯಮಟ್ಟದ ದ್ವಿತೀಯ ಅನುಸಂಧಾನ ಸ್ಪರ್ಧೆಯಲ್ಲಿ ಬೆಳಗಾವಿಯ ಬಿ.ವಿ.ಬೆಲ್ಲದ್ ಕಾನೂನು ಮಹಾವಿದ್ಯಾಲಯದ ತಂಡ ಪ್ರಥಮ ಬಹುಮಾನ ಗಳಿಸಿತು. ಮೈಸೂರಿನ ವಿದ್ಯಾ ವಿಕಾಸ ಕಾನೂನು ಕಾಲೇಜಿನ ತಂಡ ದ್ವಿತೀಯ ಬಹುಮಾನ ಹಾಗೂ ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ತಂಡ ವಿಶೇಷ ಪ್ರಶಂಸನಾ ಬಹುಮಾನ ಪಡೆದುಕೊಂಡಿತು. ರಾಜ್ಯದ ವಿವಿಧ ಕಾನೂನು ಕಾಲೇಜುಗಳ 20 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಅನುಸಂಧಾನ ಕೌಶಲ್ಯವನ್ನು ಪ್ರಸ್ತುತ ಪಡಿಸಿದವು.