

ಶಿವಮೊಗ್ಗ: ಅಧಿಕಾರಿಗಳ ಸಂಪೂರ್ಣ ಒಮ್ಮತ, ಮಾಹಿತಿ ಹಾಗೂ ಆತ್ಮವಿಶ್ವಾಸದಿಂದಲೇ ಸೋಮಣ್ಣ ಆನೆಯೇ ಅಂಬಾರಿ ಹೊರಬೇಕೆಂದು ಮೊದಲೇ ನಿರ್ಧರಿಸಲಾಗಿತ್ತೇ ಹೊರತು ಅದು ಕೊನೆ ಕ್ಷಣದ ನಿರ್ಧಾರವಾಗಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ತರಬೇತಿ ನೀಡಲಾಗಿತ್ತು. ಸೋಮಣ್ಣ ಆನೆಗೆ ಅಂಬಾರಿ ಹೊರುವ ಸಾಮರ್ಥ್ಯವಿದೆ ಎಂಬ ಕಾರಣಕ್ಕೇ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಲಭ್ಯವಿರುವ ಎಲ್ಲ ಸಾಕ್ಷ್ಯಾಧಾರಗಳಿಂದ ಆನೆ ಗಾಬರಿಯಾಗಿ ಅವಘಡ ಸಂಭವಿಸಿದೆ. ಇನ್ಮುಂದೆ ಅಂಬಾರಿ ಹೊರುವ ವಿಚಾರದಲ್ಲಿ ಮತ್ತಷ್ಟು ವೈಜ್ಞಾನಿಕವಾಗಿ ತೀರ್ಮಾನ ಕೈಗೊಳ್ಳಬೇಕು ಹಾಗೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂಬ ಸಂದೇಶವನ್ನು ಈ ಘಟನೆ ನೀಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂಬಾರಿ ಸಾಗಿಸುವ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್‌ಪಿ, ಸಿಸಿಎಫ್, ವನ್ಯಜೀವಿ ವಿಭಾಗದ ಡಿಸಿಎಫ್, ಎಡಿಸಿ, ಶಾಸಕರು ಹಾಗೂ ಪಾಲಿಕೆ ಆಯುಕ್ತರು ಸೇರಿ ಎಲ್ಲ ಹಿರಿಯ ಅಧಿಕಾರಿಗಳು ಮತ್ತು ಸಮಿತಿಯವರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.
ಈ ಬಾರಿಯ ದಸರಾ ಉತ್ಸವವು ಅತ್ಯಂತ ಸಂಭ್ರಮ ಹಾಗೂ ಅದ್ದೂರಿಯಾಗೇ ನಡೆದಿದೆ. ಆದರೆ ಅಂತಿಮ ದಿನ (ಅ.21) ಅಂಬಾರಿ ಹೊತ್ತ ಸೋಮಣ್ಣ ಗಾಬರಿಗೊಂಡು ಓಡಿದ ಕಾರಣ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಇದು ನಮಗೆ ಗಂಭೀರವಾಗಿ ಎಚ್ಚೆತ್ತುಕೊಳ್ಳುವ ಸಂದರ್ಭವನ್ನು ಸೃಷ್ಟಿಸಿದೆ ಎಂದು ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಅರಣ್ಯದಿಂದ ಆನೆಗಳನ್ನು ಕರೆತಂದು ತರಬೇತಿ ನೀಡಿ ಅಂಬಾರಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಬಾರಿಯೂ ಯಶಸ್ವಿಯಾಗಿ ತರಬೇತಿ ನೀಡಲಾಗಿತ್ತು. ಸರ್ಕಾರದ ಅಧಿಕೃತ ಅನುಮತಿ ಪಡೆದು ಅರಣ್ಯ ಇಲಾಖೆಯ ನಿಯಮಾನುಸಾರ ಆನೆಗಳ ಆಯ್ಕೆ ಮತ್ತು ತರಬೇತಿ ನೀಡಲಾಗಿದೆ. ಅವಘಡದ ವೇಳೆ ದೇವಿಯ ವಿಗ್ರಹ ಹಾಗೂ ಆಭರಣಗಳಿಗೆ ಯಾವುದೇ ನಷ್ಟ ಸಂಭವಿಸಿಲ್ಲ. ಇತರೆ ಸಣ್ಣಪುಟ್ಟ ನಷ್ಟಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಸರ್ಕಾರಕ್ಕೆ ಈ ಕುರಿತು ಸಿಸಿಎಫ್ ಅವರು ಶುಕ್ರವಾರ ಸತ್ಯಶೋಧನಾ ವರದಿ ಸಲ್ಲಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಗೂ ಮುನ್ನ ಮಹಾನಗರ ಪಾಲಿಕೆ ಆಯುಕ್ತ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಘಟನೆ ಕುರಿತು ಸುಮಾರು ಅರ್ಧ ಗಂಟೆ ಅಧಿಕಾರಿಗಳಿಂದ ವಿವರಣೆ ಪಡೆದರು. ಇದೇ ವೇಳೆ ಭಗ್ನಗೊಂಡಿರುವ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಸಚಿವರು ಪರಿಶೀಲಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಬಲ್ಕಿಷ್ ಬಾನು, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಮಟ್ಟದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಸೂಡಾ ಅಧ್ಯಕ್ಷ ಮಧಸೂದನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಸಿ.ಯೋಗೇಶ್, ಎಸ್‌ಪಿ ಬಿ.ನಿಖಿಲ್, ಜಿಪಂ ಸಿಇಒ ರಿಷಿ ಆನಂದ್, ಸಿಸಿಎಫ್ ಕೆ.ಟಿ.ಹನುಮಂತಪ್ಪ, ಎಡಿಸಿ ವಿ.ಅಭಿಷೇಕ್, ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಮತಿತರರು ಹಾಜರಿದ್ದರು.