ಭದ್ರಾದಿಂದ 20 ದಿನ ನೀರು ಹರಿಸದಿದ್ದರೆ ಡಿಸಿ ಕಚೇರಿ ಮುತ್ತಿಗೆ K.T.Gangadhar

ಶಿವಮೊಗ್ಗ: ಭದ್ರಾ ಜಲಾಶಯದಿಂದ ಬಲ ಹಾಗೂ ಎಡದಂಡೆ ನಾಲೆಗಳಲ್ಲಿ ಸತತ 20 ದಿನ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನ.25ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ರೈತ ನಾಯಕ ಕೆ.ಟಿ.ಗಂಗಾಧರ್ ಹೇಳಿದರು.
 K.T.Gangadhar
ರೈತ ನಾಯಕ ಕೆ.ಟಿ.ಗಂಗಾಧರ್
Published on: 

ಶಿವಮೊಗ್ಗ: ಭದ್ರಾ ಜಲಾಶಯದಿಂದ ಬಲ ಹಾಗೂ ಎಡದಂಡೆ ನಾಲೆಗಳಲ್ಲಿ ಸತತ 20 ದಿನ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನ.25ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ರೈತ ನಾಯಕ ಕೆ.ಟಿ.ಗಂಗಾಧರ್ ಹೇಳಿದರು.

ಬೆಳಗ್ಗೆ 10ಕ್ಕೆ ಪುರಲೆ ಗ್ರಾಮದ ವೃತ್ತದಿಂದ ಹಸಿರು ಬಾವುಟಗಳನ್ನು ಹಿಡಿದು 300 ಟ್ರ್ಯಾಕ್ಟರ್‌ಗಳೊಂದಿಗೆ ರ‌್ಯಾಲಿ ಆರಂಭವಾಗಲಿದ್ದು, 10 ಸಾವಿರಕ್ಕೂ ಅಧಿಕ ರೈತರು ರ‌್ಯಾಲಿಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಕಚೇರಿ ತಲುಪುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭದ್ರಾ ಜಲಾಶಯದಲ್ಲಿ ಸುಮಾರು 178 ಅಡಿ ನೀರು ಸಂಗ್ರಹವಿದ್ದರೂ ಅಚ್ಚುಕಟ್ಟು ಪ್ರದೇಶದ ರೈತರಿಗೆ ನಾಲೆಗಳ ಮೂಲಕ ನೀರು ಹರಿಸದೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸುಮಾರು 4 ಟಿಎಂಸಿ ನೀರು ಹರಿಸಿರುವುದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.

ಈ ಕುರಿತು ರೈತ ಸಂಘವು ಕಳೆದ 23 ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಮುಂದುವರಿಸಿದೆ. ಬಲ ಮತ್ತು ಎಡದಂಡೆ ನಾಲೆಗಳಲ್ಲಿ 10 ದಿನ ನೀರು ಹರಿಸುವುದಾಗಿ ಸರ್ಕಾರ ಘೋಷಿಸಿತ್ತಾದರೂ ಮೂರು ದಿನಗಳಲ್ಲೇ ನೀರು ಸ್ಥಗಿತಗೊಳಿಸಿದೆ. ಇದರಿಂದ ಅಡಿಕೆ ಸೇರಿ ವಿವಿಧ ಬೆಳೆಗಳು ಒಣಗುವ ಹಂತ ತಲುಪಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.

ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬಲ ಮತ್ತು ಎಡದಂಡೆ ನಾಲೆಗಳಲ್ಲಿ 20 ದಿನ ನೀರು ಹರಿಸಬೇಕು. ಜನವರಿಯಿಂದ ರೈತರ ಬೆಳೆಗಳಿಗೆ ನೀರು ಒದಗಿಸುವ ವೇಳಾಪಟ್ಟಿಯನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಜಗನ್ನಾಥ್,ಯಶವಂತ್‌ರಾವ್ ಘೋರ್ಪಡೆ, ಜಗದೀಶ್, ಕೃಷ್ಣಮೂರ್ತಿ, ಮೆಸ್ತಾರ್, ಗೋಂಧಿ ಜಯರಾಮ್, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ವರ್ಗಾಯಿಸುವ ಪ್ರಯತ್ನ ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಜಲಾಶಯವನ್ನು ಈಗಿರುವ ನಿಗಮದ ವ್ಯಾಪ್ತಿಯಲ್ಲಿಯೇ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ನಿಗಮ ಬದಲಾವಣೆ ಮಾಡಬಾರದು.
ಕೆ.ಟಿ.ಗಂಗಾಧರ್, ರೈತ ನಾಯಕ