ಶಿವಮೊಗ್ಗದ ರೌಡಿಶೀಟರ್ ಅಜ್ಜು ಬಂಧನ rowdy-sheeter Arrest

ಶಿವಮೊಗ್ಗ: ಗಾಂಜಾ ಸಂಗ್ರಹಣೆ, ಸಾಗಾಟ ಹಾಗೂ ಮಾರಾಟ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸವಾಯಿಪಾಳ್ಯದ ಮೊಹಮ್ಮದ್ ಅಜರುದ್ದೀನ್ ಅಲಿಯಾಸ್ ಅಜ್ಜು (28) ಎಂಬಾತನನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿದ್ದು, ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿರಿಸಲು ಆದೇಶಿಸಲಾಗಿದೆ.
rowdy-sheeter Arrest
ಬಂಧಿತ ಸವಾಯಿಪಾಳ್ಯದ ಮೊಹಮ್ಮದ್ ಅಜರುದ್ದೀನ್.
Published on: 

ಶಿವಮೊಗ್ಗ: ಗಾಂಜಾ ಸಂಗ್ರಹಣೆ, ಸಾಗಾಟ ಹಾಗೂ ಮಾರಾಟ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸವಾಯಿಪಾಳ್ಯದ ಮೊಹಮ್ಮದ್ ಅಜರುದ್ದೀನ್ ಅಲಿಯಾಸ್ ಅಜ್ಜು (28) ಎಂಬಾತನನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿದ್ದು, ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿರಿಸಲು ಆದೇಶಿಸಲಾಗಿದೆ.

ಅಜರುದ್ದೀನ್ ವಿರುದ್ಧ ಭದ್ರಾವತಿ ಹಳೆನಗರ ಮತ್ತು ಶಿವಮೊಗ್ಗದ ದೊಡ್ಡಪೇಟೆ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯಿದೆಯಡಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಕೊಲೆಗೆ ಯತ್ನ, ವಂಚನೆ, ಮಹಿಳೆ ಮೇಲೆ ಹಲ್ಲೆ, ದೊಂಬಿ ಗಲಾಟೆ ಸೇರಿ ಹಲವು ಪ್ರಕರಣಗಳಿವೆ. ಜಯನಗರ ಠಾಣೆಯಲ್ಲಿ ಕೊಲೆಗೆ ಯತ್ನ ಹಾಗೂ ತುಂಗಾನಗರ ಠಾಣೆಯಲ್ಲಿ ಸುಲಿಗೆ, ಕೋಕಾ ಕಾಯ್ದೆ ಸೇರಿ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ.

ಜಾಮೀನು ಪಡೆದುಕೊಂಡ ಬಳಿಕವೂ ಷರತ್ತುಗಳನ್ನು ಉಲ್ಲಂಘಿಸಿ ಮತ್ತೆ ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಈತನ ನಿರಂತರ ಕಾನೂನುಬಾಹಿರ ಚಟುವಟಿಕೆಗಳಿಂದ ಯುವಜನತೆಯ ಆರೋಗ್ಯ, ಭವಿಷ್ಯ ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಂಧನಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ಹಾಗೂ ಶಿವಮೊಗ್ಗ ‘ಎ’ ಉಪವಿಭಾಗದ ಡಿವೈಎಸ್‌ಪಿ ಅವರ ಕೋರಿಕೆಯಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ದಾವಣಗೆರೆ ಪೂರ್ವ ವಲಯದ ಐಜಿಪಿಗೆ ಅಗತ್ಯ ದಾಖಲೆಗಳೊಂದಿಗೆ ವರದಿ ಸಲ್ಲಿಸಲಾಗಿತ್ತು. ಪ್ರಸ್ತಾವನೆ ಪರಿಶೀಲಿಸಿದ ಐಜಿಪಿ ಎನ್.ಸುರೇಶ್‌ಕುಮಾರ್ ಅವರು ಆರೋಪಿಯನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧನದಲ್ಲಿಡಲು ಆದೇಶಿಸಿದ್ದಾರೆ.