ಎಲ್ಲ ಕ್ಷೇತ್ರಗಳಲ್ಲೂ ಕನ್ನಡದ ಬಳಕೆ ಹೆಚ್ಚಾಗಲಿ Nudihabba

ಶಿವಮೊಗ್ಗ: ರಾಜ್ಯೋತ್ಸವ ಸಮಾರಂಭಗಳು ಕೇವಲ ಆಚರಣೆ ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ನಮ್ಮ ಭಾಷೆ, ನೆಲ, ಸಂಸ್ಕೃತಿ, ಪರಂಪರೆ ಹಾಗೂ ಆತ್ಮಗೌರವ ಹೆಚ್ಚಿಸುವ ಮಹತ್ವದ ಸಂದರ್ಭಗಳಾಗಬೇಕು ಎಂದು ರಾಜ್ಯ ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕ ಎಸ್.ಎಂ.ರಾಮಪ್ರಸಾದ್ ಹೇಳಿದರು.
Nudihabba
ಶಿವಮೊಗ್ಗದ ಸರ್ಕಾರಿ ನೌಕರರ ಸೇವಾ ವಿಕಾಸ ಕೇಂದ್ರದಲ್ಲಿ ಕನ್ನಡ ನುಡಿಹಬ್ಬ ಹಾಗೂ ಕ್ರೀಡೋತ್ಸವವನ್ನು ರಾಜ್ಯ ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕ ಎಸ್.ಎಂ.ರಾಮಪ್ರಸಾದ್ ಉದ್ಘಾಟಿಸಿದರು. ಸಿ.ಎಸ್.ಷಡಾಕ್ಷರಿ, ಶ್ರೀಕೃಷ್ಣ ಎನ್.ಬುಗಟ್ಯಾಗೋಳ, ಹಿರೇಮಗಳೂರು ಕಣ್ಣನ್, ಮಿಥುನ್ ಬಿರಾಲ, ಆರ್.ಮೋಹನ್‌ಕುಮಾರ್, ಶ್ರೀಕಾಂತ್, ಅವಿನಾಶ್, ಪ್ರದೀಪ್, ತನುಜಾ, ನರಸಿಂಗರಾವ್ ಇದ್ದರು.
Published on: 

ಶಿವಮೊಗ್ಗ: ರಾಜ್ಯೋತ್ಸವ ಸಮಾರಂಭಗಳು ಕೇವಲ ಆಚರಣೆ ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ನಮ್ಮ ಭಾಷೆ, ನೆಲ, ಸಂಸ್ಕೃತಿ, ಪರಂಪರೆ ಹಾಗೂ ಆತ್ಮಗೌರವ ಹೆಚ್ಚಿಸುವ ಮಹತ್ವದ ಸಂದರ್ಭಗಳಾಗಬೇಕು ಎಂದು ರಾಜ್ಯ ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕ ಎಸ್.ಎಂ.ರಾಮಪ್ರಸಾದ್ ಹೇಳಿದರು.

ನಗರದ ಸರ್ಕಾರಿ ನೌಕರರ ಸೇವಾ ವಿಕಾಸ ಕೇಂದ್ರದಲ್ಲಿ ಶುಕ್ರವಾರ ರಾತ್ರಿ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಅಧಿಕಾರಿ ಹಾಗೂ ನೌಕರರ ಸಂಘದ ಆಶ್ರಯದಲ್ಲಿ ಕನ್ನಡ ನುಡಿಹಬ್ಬ ಹಾಗೂ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಕನ್ನಡದ ಬಳಕೆ ಹೆಚ್ಚಾಗಬೇಕು. ಭಾಷಾಭಿಮಾನ ನಮ್ಮ ನಡೆ - ನುಡಿ ಮತ್ತು ಆಚರಣೆಗಳಲ್ಲಿ ಪ್ರತಿಫಲಿಸಬೇಕು. ಕನ್ನಡದ ಜತೆಗೆ ಇತರ ಭಾಷೆಗಳನ್ನೂ ಗೌರವಿಸುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಭಾಷೆ ಮತ್ತು ಸಂಸ್ಕೃತಿ ಕೇವಲ ಆಚರಣೆಗಳಿಗೆ ಸೀಮಿತಗೊಳಿಸದೆ ಕಚೇರಿಯ ದೈನಂದಿನ ಕಾರ್ಯಚಟುವಟಿಕೆಗಳಲ್ಲೂ ಎತ್ತಿಹಿಡಿಯಬೇಕು. ಇಲಾಖೆಯ ಜವಾಬ್ದಾರಿಗಳನ್ನು ದಕ್ಷತೆ, ಪ್ರಾಮಾಣಿಕತೆ ಹಾಗೂ ವೃತ್ತಿಪರತೆಯಿಂದ ನಿರ್ವಹಿಸಬೇಕು. ಇಲಾಖೆಯಿಂದ ಹೊರಬರುವ ವರದಿಗಳ ಗುಣಮಟ್ಟ ಹೆಚ್ಚಿಸಲು ಅಧಿಕಾರಿಗಳು ಮತ್ತು ನೌಕರರು ವಿಶೇಷ ಗಮನಹರಿಸಬೇಕು ಎಂದು ತಿಳಿಸಿದರು.

ಸರ್ಕಾರ ಮತ್ತು ಸಾರ್ವಜನಿಕರ ಹಣದ ಸಮರ್ಪಕ ಬಳಕೆ ಹಾಗೂ ಅದರ ಹೊಣೆಗಾರಿಕೆ ಖಚಿತಪಡಿಸುವಲ್ಲಿ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಕಾವಲುಗಾರರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಇಲಾಖೆ ಆಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆಗಳಿಗೆ ತೆರೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಜನರ ವಿಶ್ವಾಸ ಗಳಿಸಿದ ಲೆಕ್ಕಪತ್ರಗಳ ಇಲಾಖೆ

ರಾಜ್ಯ ಲೆಕ್ಕಪತ್ರಗಳ ಇಲಾಖೆಯು ಆರ್ಥಿಕ ಶಿಸ್ತು, ಪಾರದರ್ಶಕತೆ, ಫಲಿತಾಂಶಾಧಾರಿತ ಕಾರ್ಯನಿರ್ವಹಣೆ ಹಾಗೂ ಸಮರ್ಪಕ ಲೆಕ್ಕಪತ್ರ ನಿರ್ವಹಣೆಯ ಮೂಲಕ ಜನರ ವಿಶ್ವಾಸ ಗಳಿಸಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಶ್ಲಾಘಿಸಿದರು. ರಾಜ್ಯ ಲೆಕ್ಕಪತ್ರಗಳ ಇಲಾಖೆ ಸರ್ಕಾರಕ್ಕೆ ಗೌರವ ಮತ್ತು ಮನ್ನಣೆ ತಂದುಕೊಡುವ ಪ್ರಮುಖ ಇಲಾಖೆಯಾಗಿದೆ. ಕ್ರೀಡೆಯು ಮನಸ್ಸಿಗೆ ಉಲ್ಲಾಸ ಮತ್ತು ಚೈತನ್ಯ ನೀಡುವುದರ ಜತೆಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕ್ರೀಡೆ ಕೇವಲ ದೈಹಿಕ ಚಟುವಟಿಕೆಯಲ್ಲ, ಅದು ಸಂಘಟನೆ, ಒಗ್ಗಟ್ಟು ಮತ್ತು ಸಹಬಾಳ್ವೆಯ ಪ್ರತೀಕವೂ ಆಗಿದೆ. ಪ್ರತಿಯೊಬ್ಬರೂ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ಕ್ರೀಡಾಕೂಟವನ್ನು ಸಂಭ್ರಮಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲೇ ಮೊದಲ ಕಾರ್ಯಕ್ರಮ

ರಾಜ್ಯದಲ್ಲಿ ಆಯೋಜಿಸಲಾದ ಮೊದಲ ಕಾರ್ಯಕ್ರಮ ಇದಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿ ಹಾಗೂ ನೌಕರರ ಸಂಘದ ನೌಕರರು ಮತ್ತು ಅವರ ಕುಟುಂಬದ ಅವಲಂಬಿತರು ಪಾಲ್ಗೊಂಡು ಸಂಭ್ರಮಿಸಿದರು. ಪ್ರತಿಭಾವಂತರಾದ 22ಕ್ಕೂ ಹೆಚ್ಚಿನ ನೌಕರರ ಮಕ್ಕಳನ್ನು ಗುರುತಿಸಿ, ಪ್ರಮಾಣಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಲೆಕ್ಕಪರಿಶೋಧನಾ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶ್ರೀಕೃಷ್ಣ ಎನ್.ಬುಗಟ್ಯಾಗೋಳ ಅಧ್ಯಕ್ಷತೆ ವಹಿಸಿದ್ದರು. ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಕನ್ನಡ ನುಡಿಹಬ್ಬದ ಸಂದೇಶ ನೀಡಿದರು. ಕರ್ನಾಟಕ ರಣಜಿ ತಂಡದ ಮಿಥುನ್ ಬಿರಾಲ ಕ್ರೀಡೋತ್ಸವದ ಸಂದೇಶ ನೀಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್, ಪ್ರಮುಖರಾದ ಅವಿನಾಶ್, ಪ್ರದೀಪ್, ತನುಜಾ, ನರಸಿಂಗರಾವ್, ಜಿಲ್ಲಾ ಶಾಖೆ ಅಧ್ಯಕ್ಷ ಕೆ.ಎಸ್.ಶ್ರೀಕಾಂತ್ ಉಪಸ್ಥಿತರಿದ್ದರು.