

ಸಾಗರ: ಕ್ರೀಡೆಯು ಆರೋಗ್ಯ ವರ್ಧನೆ ಜತೆ ನಾಯಕತ್ವದ ಗುಣಗಳನ್ನೂ ಬೆಳೆಸುತ್ತದೆ. ಪಠ್ಯದೊಂದಿಗೆ ಕ್ರೀಡೆಗೂ ಆದ್ಯತೆ ನೀಡಬೇಕು ಎಂದು ತಹಸೀಲ್ದಾರ್ ಡಾ. ಆರ್.ಪ್ರತಿಭಾ ಹೇಳಿದರು.
ನೆಹರು ಮೈದಾನದಲ್ಲಿ ಶಿಕ್ಷಣ ಇಲಾಖೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆ ಅಗತ್ಯ ಎಂದು ತಿಳಿಸಿದರು.
ಪ್ರಸ್ತುತ ಭಾರತ ಒಲಿಂಪಿಕ್ಸ್ ಸೇರಿ ಬೇರೆ ಬೇರೆ ಕ್ರೀಡಾಕೂಟದಲ್ಲಿ ಮಾಡುತ್ತಿರುವ ಸಾಧನೆ ಗಮನಾರ್ಹವಾಗಿಲ್ಲ. ಮಕ್ಕಳು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಂಚಬೇಕು. ಅಂತಹ ವಾತಾವರಣ ನಿರ್ಮಾಣ ಆಗಬೇಕು. ಮಕ್ಕಳನ್ನು ಕ್ರೀಡೆಯಲ್ಲಿ ಸಜ್ಜುಗೊಳಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಗಮನಾರ್ಹ ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ಮಕ್ಕಳ ಮೇಲೆ ಓದಿನ ಒತ್ತಡ ಹೇರುವ ಪಾಲಕರು, ಕ್ರೀಡೆಯಲ್ಲೂ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು. ಉತ್ತಮ ಕ್ರೀಡಾಪಟುಗಳನ್ನು ನಿರ್ಮಾಣ ಮಾಡುವಲ್ಲಿ ತಾಲೂಕು ಮಟ್ಟದ ಕ್ರೀಡೆ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು.
ಬಿಇಒ ಸದಾನಂದ ಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎ.ಎಸ್.ಭೂಮೇಶ್, ಭೂಕೇಶ್ವರಪ್ಪ, ರಮೇಶ್, ವಿಜಯಕುಮಾರಿ, ರಾಮಚಂದ್ರಪ್ಪ, ಚಂದ್ರಪ್ಪ, ಶಂಕರ್, ಮುಕ್ತಾ ಹೆಗಡೆ ಇತರರಿದ್ದರು.