ಶಿವಮೊಗ್ಗ: ವರದಕ್ಷಿಣೆಗಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿದ್ದ ಪತಿಗೆ 2ನೇ ಜೆಎಂಎಫ್ಸಿ ನ್ಯಾಯಾಲಯವು ಮೂರು ವರ್ಷ ಸಾದಾ ಸಜೆ ಹಾಗೂ 14 ಸಾವಿರ ರೂ. ದಂಡ ವಿಧಿಸಿದೆ.
ಟಿಪ್ಪುನಗರದ ಮಹಮ್ಮದ್ ಇರ್ಷಾದ್ ಶಿಕ್ಷೆಗೆ ಒಳಗಾದವ. ಈತ ಪತ್ನಿ ಅಸ್ಮಾ ಫರ್ಹಿನ್ ಅವರಿಗೆ ವರದಕ್ಷಿಣೆ ತರಲು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ 2023ರಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ಸ್ಪೆಕ್ಟರ್ ಭರತ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿ 2024ರಲ್ಲಿ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸಾಕ್ಷಿ ವಿಚಾರಣೆ ನಡೆಸಿ ಪರಸ್ಪರ ವಾದ ಆಲಿಸಿದ ನ್ಯಾಯಾಧೀಶ ಎನ್.ಕೆ.ಸಿದ್ಧರಾಜು ಅವರು ಮಹಮ್ಮದ್ ಇರ್ಷಾದ್ಗೆ ಮೂರು ವರ್ಷ ಸಾದಾ ಸಜೆ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ.
ಅಲ್ಲದೆ, ಕಲಂ 323 ಐಪಿಸಿಗೆ 6 ತಿಂಗಳು ಶಿಕ್ಷೆ 1 ಸಾವಿರ ರೂ. ದಂಡ, ಕಲಂ.324 ಐಪಿಸಿಗೆ 1 ವರ್ಷ ಶಿಕ್ಷೆ 1 ಸಾವಿರ ರೂ. ದಂಡ, ಕಲಂ 504 ಐಪಿಸಿಗೆ 6 ತಿಂಗಳು ಶಿಕ್ಷೆ ಮತ್ತು 1 ಸಾವಿರ ರೂ. ದಂಡ, ಕಲಂ 506 ಐಪಿಸಿಗೆ 6 ತಿಂಗಳು ಸಾದಾ ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಿದ್ದು, ಪ್ರಕರಣದಲ್ಲಿ ಉಳಿದವರನ್ನು ಬಿಡುಗಡೆ ಮಾಡಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ.ಕಿರಣ್ಕುಮಾರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.