ಕುಡಿಯುವ ನೀರು, ಗಣಪತಿ ಜಾತ್ರೆಗೆ ಸಂಬಂಧಿಸಿ ಸಾಗರದ ಎಸಿ ಕಚೇರಿ ಸಭಾಂಗಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳ ಸಭೆ ನಡೆಸಿದರು. ವೀರೇಶ್ಕುಮಾರ್, ರಶ್ಮಿ ಹಾಲೇಶ್, ಟಿ.ಪಿ.ರಮೇಶ್ ಇತರರಿದ್ದರು.
ಸಾಗರ: ದಿನೇದಿನೆ ತಾಪಮಾನ ಹೆಚ್ಚುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಗ್ರಾಮೀಣ ಭಾಗದಲ್ಲಿ ಈಗಿನಿಂದಲೇ ಮುಂಜಾಗ್ರತೆ ವಹಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಸಾಗರದ ಎಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು, ಪಿಡಿಒಗಳ ಸಭೆ ಹಾಗೂ ಗಣಪತಿ ಜಾತ್ರೆ ಪ್ರಯುಕ್ತ ಅಧಿಕಾರಿಗಳ ಸಮಾಲೋಚನಾ ಸಭೆ ನಡೆಸಿ ಮಾತನಾಡಿದರು.
ಗೆಣಸಿನಕುಣಿ, ಹೆಗ್ಗೋಡು, ಭೀಮನಕೋಣೆ ಮುಂತದೆಡೆ ನೀರಿನ ಸಮಸ್ಯೆ ಇದೆ. ಹಕ್ರೆ ಬಳಿ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಈ ತಿಂಗಳ ಅಂತ್ಯದೊಳಗೆ ಕಾರ್ಯರೂಪಕ್ಕೆ ಬರಲಿದೆ. ಅಗತ್ಯ ಇರುವ ಕಡೆಗಳಲ್ಲಿ ಕೊಳವೆ ಬಾವಿಗಳನ್ನು ತಣ ಕೊರೆಯಬೇಕು. ಗ್ರಾಮ ಪಂಚಾಯಿತಿಗೆ ನೇಮಕವಾಗಿರುವ ಆಡಳಿತಾಧಿಕಾರಿಗಳು ಆಗಾಗ್ಗೆ ಪಂಚಾಯಿತಿಗೆ ಹೋಗಿ ಕುಂದುಕೊರತೆ ಪರಿಶೀಲಿಸಬೇಕು. ಆನಂದಪುರ ಮತ್ತು ಕಣ್ಣೂರು ಜಾತ್ರೆ ಇರುವುದರಿಂದ ಆ ಭಾಗದಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯತ್ಯಯ ಆಗದಂತೆ ಗಮನಹರಿಸಲು ಸೂಚಿಸಿದರು.
ಗಣಪತಿ ಜಾತ್ರೆಯನ್ನು ಸಹ ಅದ್ದೂರಿಯಾಗಿ ನಡೆಸಲು ಎಲ್ಲರೂ ಸಹಕಾರ ನೀಡಬೇಕು. ಜಾತ್ರೆಗೆ ಮುಜರಾಯಿ ಇಲಾಖೆಯಿಂದ ಕಡಿಮೆ ಅನುದಾನ ಬರುತ್ತಿದೆ. ಸ್ಟಾಲ್ ಇನ್ನಿತರೆ ಹರಾಜಿನಿಂದ ಬರುವ ಹಣವನ್ನು ಜಾತ್ರೆ ವೆಚ್ಚಕ್ಕೆ ಬಳಸಿಕೊಳ್ಳಬೇಕು. ಜನತೆ ನೀಡಿದ ಹಣವನ್ನು ಪಾರದರ್ಶಕವಾಗಿ ಬಳಸಿ. ಜಾತ್ರೆ ವೇಳೆ ಸ್ವಚ್ಛತೆ ಹಾಗೂ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ತಿಳಿಸಿದರು.
ದೇವಸ್ಥಾನದ ವ್ಯಾಪ್ತಿಯಲ್ಲಿ ಅನ್ಯ ಆಹಾರ ಸೇವಿಸುವ, ಹಂಚುವ ಕೆಲಸ ಮಾಡಿದಲ್ಲಿ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಂದಿರ, ಮಸೀದಿ ಎರಡೂ ಇಲ್ಲಿ ಇರುವುದರಿಂದ ಪವಿತ್ರ್ಯತೆ ಕಾಪಾಡಬೇಕು. ಇತ್ತೀಚಿಗೆ ಗೋವುಗಳ ಕಳ್ಳತನ ಆಗುತ್ತಿರುವ ಬಗ್ಗೆಯೂ ನನಗೆ ಮಾಹಿತಿ ಬಂದಿದೆ. ಎಚ್ಚರವಹಿಸುವಂತೆ ಸಾಗರ ಎಸಿ, ಡಿವೈಎಸ್ಪಿ ಬಳಿ ಮಾತನಾಡಿದ್ದೇನೆ.