

ಆಯನೂರು: ಅನುದಾನದ ಕೊರತೆಯಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಎರಡು ವರ್ಷಗಳ ಹಿಂದೆ ಮಂಜೂರಾದ ಕಾಮಗಾರಿಗಳಿಗೆ ಈಗಲೂ ಹಣ ಬಿಡುಗಡೆಯಾಗಿಲ್ಲ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಅಸಮಾಧಾನ ವ್ಯಕ್ತಪಡಿಸಿದರು.
ಕುಂಸಿಯಿಂದ ರೇಚಿಕೊಪ್ಪ ಗ್ರಾಮದವರೆಗೆ 2 ಕೋಟಿ ರೂ. ಅನುದಾನದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಹಾಗೂ ನಮಗೆಲ್ಲ 25 ಕೋಟಿ ರೂ. ಅನುದಾನ ನೀಡಿದ್ದಾರೆ. ಇದರಲ್ಲಿ ಪಿಡಬ್ಲುೃಡಿಗೆ 10 ಕೋಟಿ ರೂ. ಮೀಸಲಿಡುವಂತೆ ತಿಳಿಸಿದ್ದಾರೆ. ಉಳಿದ ಹಣದಲ್ಲಿ 10 ಕೋಟಿ ಆರ್‌ಡಿಪಿಆರ್ ರಸ್ತೆಗಳಿಗೆ ವಿನಿಯೋಗಿಸುವಂತೆ ತಿಳಿಸಿದ್ದರಿಂದ ಕುಂಸಿ-ರೇಚಿಕೊಪ್ಪ ರಸ್ತೆ ಕಾಮಗಾರಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಕುಂಸಿ ಗ್ರಾಮದ ಮುಖಂಡ ಸಂಜೀವಪ್ಪ ಮಾತನಾಡಿ, ಮೊದಲ ಬಾರಿ ಶಾಸಕಿಯಾಗಿದ್ದಾಗಲೇ ಕುಂಸಿ- ರೇಚಿಕೊಪ್ಪ ರಸ್ತೆಗೆ ಬೇಡಿಕೆ ಇಡಲಾಗಿತ್ತು. ಎರಡೂವರೆ ವರ್ಷಗಳ ಹಿಂದೆ ನೀಡಿದ್ದ ರೇಚಿಕೊಪ್ಪ-ರಾಗಿಹೊಸಳ್ಳಿ ರಸ್ತೆ ನಿರ್ಮಾಣಕ್ಕೆ ಪ್ರಗತಿ ಪಥ ಯೋಜನೆಯಲ್ಲಿ ಟೆಂಡರ್ ಆಗಿದೆ. ಕಳಪೆ ರಸ್ತೆಯಿಂದ ಆ ಗ್ರಾಮದ ಜನರ ಸಂಪರ್ಕವೇ ಕಡಿಮೆಯಾಗಿತ್ತು. ಶಾಸಕಿ ಬಳಿ ಯಾರೆ ಹೋದರೂ ಪಕ್ಷ ಬೇಧವಿಲ್ಲದೆ ಸೌಜನ್ಯದಿಂದ ಮಾತನಾಡಿಸುತ್ತಾರೆ ಎಂದರು.
ಏತ ನೀರಾವರಿ ಯೋಜನೆಯಾಗಿದ್ದರೂ ಸಹ ಹಲವು ಕೆರೆಗಳಿಗೆ ನೀರು ಬರುತ್ತಿಲ್ಲ. ರಸ್ತೆ, ಚರಂಡಿ ಇನ್ನಿತರ ಸಮಸ್ಯೆಗಳನ್ನು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು. ಗ್ರಾಮದ ಮಸೀದಿ ಗುರುಗಳಿಗೆ ಮನೆ ನೀಡುವಂತೆ ಮುಸ್ಲಿಂ ಮುಖಂಡರು ಮನವಿ ಸಲ್ಲಿಸಿದರು.
ಕುಂಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಶಾರದಾ ರಂಗನಾಥ, ಜಿಡಿಎಸ್ ಮುಖಂಡ ಬಸಪ್ಪ ಗೌಡ, ಗ್ರಾಮಸ್ಥರಾದ ರಾಮಪ್ಪ, ಕೆ.ಮಂಜಪ್ಪ, ರೇವಣ್ಣ, ಶಾಹೀರಾ ಬೇಗಂ, ಕೇಶವಮೂರ್ತಿ, ರಾಘವೇಂದ್ರ, ಇಮ್ತಿಯಾಜ್, ಸುರೇಶ್, ಕೆಆರ್‌ಡಿಎಲ್ ಇಂಜಿನಿಯರ್ ಮಲ್ಲಿಕಾರ್ಜುನ, ಗುತ್ತಿಗೆದಾರ ಶಿವಕುಮಾರ್ ಇತರರಿದ್ದರು.