

ಶಿವಮೊಗ್ಗ: ಮೂರು ತಿಂಗಳೊಳಗೆ ಶಿಕ್ಷಣ ಹಕ್ಕು ಕಾಯ್ದೆ ಸಮಗ್ರ ಜಾರಿಗೆ ಒತ್ತಾಯಿಸಿ ಗುರುವಾರ ಎಸ್‌ಡಿಎಂಸಿಗಳ ಸಮನ್ವಯ ವೇದಿಕೆಯ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
2002ರ 86ನೇ ಸಂವಿಧಾನ ತಿದ್ದುಪಡಿಯ ಮೂಲಕ ಅನುಚ್ಛೇದ 21ಎ ಸೇರಿಸಿ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಮಾನ್ಯ ಮಾಡಲಾಯಿತು. ಈ ಹಕ್ಕನ್ನು ಕಾರ್ಯರೂಪಕ್ಕೆ ತರಲು ರೂಪುಗೊಂಡ ಶಿಕ್ಷಣ ಹಕ್ಕು ಕಾಯ್ದೆ 2009 ದೇಶಾದ್ಯಂತ 2010ರ ಏ.1ರಿಂದ ಜಾರಿಗೆ ಬಂದಿತು. ಕಾಯ್ದೆ ಪ್ರಕಾರ 3 ವರ್ಷದೊಳಗೆ ಇದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಬೇಕಾಗಿತ್ತು. ಆದರೆ ಅವಧಿ ಮುಗಿದು 13 ವರ್ಷಗಳು ಕಳೆದರೂ ಈ ಕಾನೂನು ಅನುಷ್ಠಾನವಾಗದೆ ಮಕ್ಕಳಿಗೆ ನಷ್ಟ ಉಂಟಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಶಾಲಾ ದತ್ತು/ಮೆಂಟರ್ ಯೋಜನೆಯನ್ನು ತಕ್ಷಣ ಹಿಂಡೆಯಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರೂಪುಗೊಂಡ ಕಾಯ್ದೆಯ ಆಶಯವನ್ನು ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೂರ್ಣ ಸಾಕಾರಗೊಳಿಸಿಲ್ಲ ಎಂದು ಆರೋಪಿಸಿದರು.
ಸಮನ್ವಯ ವೇದಿಕೆ ಅಧ್ಯಕ್ಷ ಬಿ.ಪಿ.ಸತೀಶ್, ಉಪಾಧ್ಯಕ್ಷ ಅಮೀರ್ ಬಾಷಾ, ಪ್ರಮುಖರಾದ ಚಂದ್ರು, ರಮ್ಯಾ, ಹೊಂಬೇಗೌಡ, ಡಾಕ್ಯಾನಾಯ್ಕ, ಫಾತಿಮಾ ಬೇಗಂ, ಮಹಮ್ಮದ್ ಗೌಸ್ ಪ್ರತಿಭಟನೆಯಲ್ಲಿದ್ದರು.