

ಸಾಗರ: ಕಳೆದ ನಾಲ್ಕು ತಿಂಗಳಿನಿಂದ ಅಕ್ಷರ ದಾಸೋಹ ಸಿಬ್ಬಂದಿಗೆ ಗೌರವ ಧನ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘದ ಪದಾಧಿಕಾರಿಗಳು ಮಹಾಗಣಪತಿ ದೇವಸ್ಥಾನದಿಂದ ಸಾಗರದ ಉಪವಿಭಾಗಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದರು.
ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಠ ಕೂಲಿ ಹಾಗೂ ನಿಗದಿತ ಅವಧಿಯಲ್ಲಿ ವೇತನ ಮಂಜೂರಾತಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಆದರೆ ನಾಲ್ಕು ತಿಂಗಳಿನಿಂದ ಸಿಬ್ಬಂದಿಗೆ ವೇತನ ಬಂದಿಲ್ಲ. ರಾಜ್ಯ ಸರ್ಕಾರ ಅನುದಾನ ನೀಡಿದ್ದರೂ ಕೇಂದ್ರ ಸರ್ಕಾರ ಬಿಡುಗಡೆ ಮಾಡದೇ ಇರುವುದರಿಂದ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಹೊಸದೊಂದು ಆ್ಯಪ್ ತಂದಿದ್ದು, ಅದರ ಮೂಲಕ ಮಾಹಿತಿ ಭರ್ತಿ ಮಾಡಲು ಲಾಗಿನ್ ಆಗುತ್ತಿಲ್ಲ ಎಂದು ದೂರಿದರು.
ಬಿಸಿಯೂಟ ಕಾರ್ಯಕರ್ತೆಯರು ಇದೇ ಹಣದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ನಾಲ್ಕು ತಿಂಗಳಿನಿಂದ ವೇತನ ನೀಡದೇ ಇರುವುದರಿಂದ ಸಾಲ ಮಾಡಿ ಜೀವನ ಮಾಡಬೇಕಾದ ಸ್ಥಿತಿ ಇದೆ. ತಕ್ಷಣ ಬಾಕಿ ವೇತನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಜಿಪಂ ಸಿಇಒ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದು ನಿಶ್ಚಿತ ಎಂದು ಎಚ್ಚರಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಪರಮೇಶ್ವರ ನಾಯ್ಕ್, ಸವಿತಾ, ಪ್ರೇಮಾ, ಶರಾವತಿ, ರೂಪಾ, ಪುಷ್ಪಾ, ಮಂಜುನಾಥ್ ಇತರರಿದ್ದರು.