ರಾಜಕೀಯ ಅಸ್ತ್ರವಾಗಿ ಎಸ್‌ಐಆರ್ ಬಳಸುತ್ತಿರುವ ಕಾಂಗ್ರೆಸ್ SIR

ಶಿವಮೊಗ್ಗ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿಷಯವಾಗಿ ರಾಜ್ಯದಲ್ಲಿ ಇಷ್ಟೊಂದು ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ. ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ತನ್ನ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
SIR
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
Published on: 

ಶಿವಮೊಗ್ಗ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿಷಯವಾಗಿ ರಾಜ್ಯದಲ್ಲಿ ಇಷ್ಟೊಂದು ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ. ಇಡೀ ಎಸ್‌ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ತನ್ನ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಎಲ್ಲ ಕ್ಷೇತ್ರಗಳಲ್ಲಿ ಸಂಪೂರ್ಣ ವಿಫಲವಾಗುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿ ಹಾಕಲು ಎಸ್‌ಐಆರ್ ವಿಷಯವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಯಾಗಿ ಬೀದಿಗಿಳಿದು ಹೋರಾಟ ಮಾಡಿದ್ದು ದುರ್ದೈವ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರವಿಲ್ಲ. ಇಡೀ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ತಪ್ಪಾಗಿ ಬಳಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಅನೇಕ ಜನರು ಬೇರೆ ಜಿಲ್ಲೆ ಅಥವಾ ಬೇರೆಡೆ ವಲಸೆ ಹೋಗಿದ್ದಾರೆ. ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಈ ವಿಚಾರ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳಗಾವಿ ಶಾಸಕ ಅಭಯ್ ಪಾಟೀಲ್ ಅವರು ಮತದಾರರ ಹೆಸರು ಡಿಲೀಟ್ ಮಾಡಲು ಬರೆದಿರುವ ಪತ್ರದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾನು ಮುಸ್ಲಿಮರ ಅಥವಾ ದಲಿತರ ಹೆಸರುಗಳನ್ನು ಕೈಬಿಡಿ ಎಂದು ಎಲ್ಲೂ ಹೇಳಿಲ್ಲ. ಯಾರು ಮತದಾರರು ನನ್ನ ಕ್ಷೇತ್ರ ಬಿಟ್ಟು ಬೇರೆಡೆಗೆ ಹೋಗಿದ್ದಾರೋ, ಅವರ ಹೆಸರು ಮಾತ್ರ ಕೈಬಿಡಲು ಹೇಳಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲೇ 56 ಸಾವಿರ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗಿವೆ. ಅದರಲ್ಲಿ ಅನೇಕ ಜನ ಮೃತಪಟ್ಟಿದ್ದಾರೆ. ಮೃತರಾದವರ ಹೆಸರನ್ನು ಕೂಡ ಡಿಲೀಟ್ ಮಾಡದೆ ಪಟ್ಟಿಯಲ್ಲಿ ಹಾಗೆಯೇ ಉಳಿಸಬೇಕಿತ್ತೇ? ಈ ರೀತಿ ಅಪಪ್ರಚಾರ ಮಾಡುವುದು ಖಂಡನೀಯ ಎಂದು ತಿಳಿಸಿದರು.

ಒಂದು ವೇಳೆ ನಿಮ್ಮದೇ ಸರ್ಕಾರದ ಅವಧಿಯಲ್ಲಿ ಅರ್ಹರ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿದ್ದರೆ, ನೀವೇ ಆ ಹೆಸರನ್ನು ಮರಳಿ ಸೇರಿಸಬಹುದು ಎಂದು ಹೇಳಿದರು.

ವೈಫಲ್ಯ ಮುಚ್ಚಿಹಾಕುವ ಯತ್ನ

ಇತ್ತೀಚೆಗೆ ನಡೆದ ಸಾಧು-ಸಂತರ ಸಭೆಯಲ್ಲಿ ಮುಖ್ಯಮಂತ್ರಿಗಳು ನೀವೆಲ್ಲರೂ ನನ್ನ ರಾಯಭಾರಿಗಳು, ನೀವು ನನ್ನ ಸೇವೆ ಮಾಡಬೇಕು ಎಂದಿದ್ದಾರೆ. ಸ್ವಾಮೀಜಿಗಳು ಅವರ ಈ ಮಾತನ್ನು ಹೇಗೆ ಸಹಿಸಿಕೊಂಡಿದ್ದಾರೋ ಗೊತ್ತಿಲ್ಲ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಆರ್‌ಎಸ್‌ಎಸ್, ಬಿಜೆಪಿಯನ್ನು ರಾಜ್ಯದಿಂದ ಓಡಿಸಬೇಕು ಎಂದು ಕರೆಕೊಟ್ಟಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಓಡಿಸಲು ಅವರ ಅಪ್ಪನ ಕೈಯಲ್ಲೂ ಆಗಲಿಲ್ಲ, ಅಜ್ಜನ ಕೈಯಲ್ಲೂ ಆಗಲಿಲ್ಲ. ಇನ್ನು ಇವರಿಂದ ಎಲ್ಲಿ ಸಾಧ್ಯವಾಗುತ್ತದೆ? ಈ ಎಲ್ಲ ವೈಫಲ್ಯ ಹಾಗೂ ಗೊಂದಲಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ನಾಯಕರು ಎಸ್‌ಐಆರ್ ಮುಂದಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.

ಎಸ್‌ಐಆರ್‌ಅನ್ನು ರಾಜಕೀಯವಾಗಿ ಬಳಸಿಕೊಂಡು ಜನರಲ್ಲಿ ಸುಮ್ಮನೆ ಗೊಂದಲ ಸೃಷ್ಟಿಸಬಾರದು. ಎಸ್‌ಐಆರ್ ಎನ್ನುವುದು ಮತದಾರರ ಪಟ್ಟಿಯನ್ನು ಜರಡಿ ಹಿಡಿದು ಶುದ್ಧೀಕರಿಸುವ ಒಂದು ಅಸ್ತ್ರ. ಆ ಕೆಲಸವನ್ನು ಚುನಾವಣಾ ಆಯೋಗ ನಿಯಮಾನುಸಾರ ಮಾಡುತ್ತಿದೆ.
ಕೆ.ಎಸ್.ಈಶ್ವರಪ್ಪ,ಮಾಜಿ ಉಪಮುಖ್ಯಮಂತ್ರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net