ಡಾಂಬರ್ ವ್ಯಾಪಾರಿಗೆ 31 ಲಕ್ಷ ರೂ. ವಂಚನೆ । Online fraud
ಆನ್‌ಲೈನ್ ವಂಚನೆ ಸಾಂದರ್ಭಿಕ ಚಿತ್ರ
Published on:
Copied
Follow Us
ಶಿವಮೊಗ್ಗ: ಭದ್ರಾವತಿಯ ಡಾಂಬರ್(Asphalt) ವ್ಯಾಪಾರಿಯೊಬ್ಬರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಡುವುದಾಗಿ ನಂಬಿಸಿ ಬರೋಬ್ಬರಿ 31.06 ಲಕ್ಷ ರೂ. ವಂಚಿಸಲಾಗಿದೆ.
ಭದ್ರಾವತಿ ಹುಡ್ಕೊ ಕಾಲನಿಯ 47 ವರ್ಷದ ವ್ಯಾಪಾರಿ ಐದು ವರ್ಷಗಳ ಹಿಂದೆ ಜಸ್ಟ್ ಡಯಲ್ನಲ್ಲಿ(Just dail)ತಮ್ಮ ಮೊಬೈಲ್ ನಂಬರ್ ನೋಂದಣಿ ಮಾಡಿಕೊಂಡಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಹನಿಸಿಂಗ್ ಸಬರ್ ವಾಲ್(hanisingh sabarwal) ಎಂಬಾತ ಕರೆ ಮಾಡಿ ತಾನು ಕಂಪನಿಯೊಂದರ ಎಂಡಿ(ವ್ಯವಸ್ಥಾಪಕ ನಿರ್ದೇಶಕ) ಎಂದು ಪರಿಚಯಿಸಿಕೊಂಡಿದ್ದನು. ಕರ್ನಾಟಕದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು, ಅದಕ್ಕೆ ಬೇಕಾದ ಡಾಂಬರು ಪೂರೈಕೆ ಮಾಡುವಂತೆ ಹೇಳಿದ್ದ. ಅದಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದ್ದ.
ನಂತರ ನೋಂದಣಿ ಪ್ರಕ್ರಿಯೆಯ ನೆಪದಲ್ಲಿ ವಂಚಕರು ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಿ, ಹಂತ ಹಂತವಾಗಿ ಹಣ ಪಾವತಿಸುವಂತೆ ಹೇಳಿದ್ದಾರೆ. ಅದನ್ನು ನಂಬಿದ ವ್ಯಾಪಾರಿ ಸೆ.30ರಿಂದ ಡಿ.22ರ ಅವಧಿಯಲ್ಲಿ ವಂಚಕರು ನೀಡಿದ್ದ ಬ್ಯಾಂಕ್ ಖಾತೆಗೆ 31,06,300 ರೂ. ವರ್ಗಾವಣೆ ಮಾಡಿದ್ದಾರೆ.
ಇಷ್ಟು ಹಣ ಪಾವತಿಸಿದರೂ ಯಾವುದೇ ನೋಂದಣಿ ಪತ್ರ ನೀಡದ ವಂಚಕರು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಿದರೂ ಕೆಲಸವಾಗದಿದ್ದಾಗ ಮತ್ತು ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದಾಗ ಅನುಮಾನಗೊಂಡ ವ್ಯಾಪಾರಿಗೆ ವಂಚನೆ ಒಳಗಾಗಿರುವುದು ಅರಿವಿಗೆ ಬಂದಿದ್ದು, ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.