ಜನಧನ್ ಯೋಜನೆಗೆ 12ವರ್ಷ ಪೂರ್ಣ I janadhan scheme

ಬಿ.ವೈ.ರಾಘವೇಂದ್ರ ಲೀಡ್ ಬ್ಯಾಂಕ್‌ನ ತ್ರೈಮಾಸಿಕ ಪರಿಶೀಲನಾ ಸಭೆ ನಡೆಸಿದರು. ಎನ್.ಹೇಮಂತ್, ಸಂಜೀವ್ ಕುಮಾರ್, ಶರತ್ ಪಿ.ಗೌಡ ಇದ್ದರು.
ಬಿ.ವೈ.ರಾಘವೇಂದ್ರ ಲೀಡ್ ಬ್ಯಾಂಕ್‌ನ ತ್ರೈಮಾಸಿಕ ಪರಿಶೀಲನಾ ಸಭೆ ನಡೆಸಿದರು. ಎನ್.ಹೇಮಂತ್, ಸಂಜೀವ್ ಕುಮಾರ್, ಶರತ್ ಪಿ.ಗೌಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಪನ್ಮೂಲ ಸದ್ಬಳಕೆಗೆ ಸಹಕಾರಿ ಯೋಜನೆ
  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿಕೆ
  • ಜಿಪಂ ಸಭಾಂಗಣದಲ್ಲಿ ಲೀಡ್ ಬ್ಯಾಂಕ್ ತ್ರೈಮಾಸಿಕ ಸಭೆ
ಶಿವಮೊಗ್ಗ :

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜನಧನ್ (jan dhan) ಯೋಜನೆಗೆ (scheme) 12ವರ್ಷ ಪೂರ್ಣಗೊಂಡಿದೆ. ಇದರ ಸಮರ್ಪಕ ಅನುಷ್ಠಾನದಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ವದ್ದು. ಪ್ರಧಾನಿ ನರೇಂದ್ರ ಮೋದಿ (modi) ಅವರ ವಿಕಸಿತ ಭಾರತ ಕಲ್ಪನೆ ಸಕಾರಗೊಳ್ಳಲು ಬ್ಯಾಂಕ್‌ಗಳು ಇನ್ನಷ್ಟು ಕೊಡುಗೆ ನೀಡಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಲೀಡ್ ಬ್ಯಾಂಕ್‌ನ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಜನಧನ್ ಯೋಜನೆ ಅತ್ಯಂತ ಕ್ರಾಂತಿಕಾರಿಯಾದುದು. ನೇರ ನಗದು ಪಾವತಿ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ಸಂಪನ್ಮೂಲದ ಸದ್ಬಳಕೆಯಾಗಲು ಇದು ಸಹಕಾರಿಯಾಗಿದೆ ಎಂದರು.
ಜನಧನ್ ಯೋಜನೆ ಮೂಲಕ 59 ಕೋಟಿ ಖಾತೆಗಳನ್ನು ದೇಶವ್ಯಾಪಿ ತೆರೆಯಲಾಗಿದೆ. ಈ ಖಾತೆಗಳಲ್ಲಿ 3.17 ಲಕ್ಷ ಕೋಟಿ ರೂ. ಜಮೆಯಾಗಿದೆ. ಈ ಯೋಜನೆಯಲ್ಲಿ ತೆರೆಯಲಾದ ಖಾತೆಗಳ ಪೈಕಿ ಶೇ.56ರಷ್ಟು ಮಹಿಳೆಯರ ಖಾತೆಗಳು ಸೇರಿವೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಇದು ಪೂರಕ ಎಂದು ಅಭಿಪ್ರಾಯಪಟ್ಟರು.
ಬ್ಯಾಂಕ್‌ಗಳು ಇನ್ನಷ್ಟು ಬಲಗೊಂಡು ರೈತರ ಆದಾಯ ದ್ವಿಗುಣಗೊಳಿಸುವಲ್ಲಿ, ಯುವಕರು ಹೊಸ ಉದ್ಯಮ ಸ್ಥಾಪಿಸುವಲ್ಲಿ ಆರ್ಥಿಕ ನೆರವು ನೀಡಬೇಕು. 2014ಕ್ಕೆ ಹೋಲಿಸಿದರೆ ಈಗ ಬ್ಯಾಂಕ್‌ಗಳಲ್ಲಿ ಎನ್‌ಪಿಎ ತೀವ್ರತರದಲ್ಲಿ ಕಡಿಮೆಯಾಗಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಜಿಪಂ ಸಿಇಒ ಎನ್.ಹೇಮಂತ್, ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಸಂಜೀವ್ ಕುಮಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹನುಮಂತಪ್ಪ, ಆರ್‌ಬಿಐ ಬೆಂಗಳೂರಿನ ಎಜಿಎಂ ಬಾಬುಲ್ ಬುರ್ಡೊಲಾಯ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಶರತ್ ಪಿ.ಗೌಡ ಉಪಸ್ಥಿತರಿದ್ದರು.

ವಸತಿ ಯೋಜನೆ ವಿಳಂಬಕ್ಕೆ ಬೇಸರ

ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅನುಷ್ಠಾನದ ವಿಳಂಬಕ್ಕೆ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಯೋಜನೆ ಮುಕ್ತಾಯಕ್ಕೆ ಇಷ್ಟೊಂದು ವರ್ಷ ತೆಗೆದುಕೊಂಡರೆ ಹೇಗೆ? ಗೋವಿಂದಾಪುರದಲ್ಲಿ ಈಗ ನಿರ್ಮಾಣವಾಗಿರುವ ಮನೆಗಳನ್ನು ಇನ್ನೂ ಫಲಾನುಭವಿಗಳಿಗೆ ಹಸ್ತಾಂತರ ಮಾಡಿಲ್ಲ. ಇ-ಸ್ವತ್ತು, ಬ್ಯಾಂಕ್ ಸಾಲ ಮಂಜೂರು ಮುಂತಾದ ತಾಂತ್ರಿಕ ಸಂಗತಿಗಳಿಗೆ ಪರಿಹಾರ ಕಂಡುಕೊಳ್ಳಬೇಕು. ನಿರ್ಮಾಣ ಹಂತದಲ್ಲಿರುವ ಮನೆಗಳನ್ನೂ ಶೀಘ್ರದಲ್ಲೇ ಪೂರ್ಣಗೊಳಿಸಿ ಫಲಾನುಭವಿಗಳಿಗೆ ನೀಡಬೇಕು. ಬ್ಯಾಂಕ್‌ಗಳು ಈ ಮನೆಗಳನ್ನು ಆಧಾರವಾಗಿಸಿಕೊಂಡು ಸಾಲ ಸೌಲಭ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪಪ್ರಚಾರಕ್ಕೆ ಉತ್ತರ ನೀಡಿ

ಸಹಕಾರಿ ವಲಯಕ್ಕೆ ನಬಾರ್ಡ್‌ನಿಂದ ಸರಿಯಾದ ಸಹಕಾರ ನೀಡುತ್ತಿಲ್ಲ ಅನ್ನುವ ಮೂಲಕ ಕೆಲವರು ವಿನಾಕಾರಣ ಕೇಂದ್ರ ಸರ್ಕಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ವಾಸ್ತವ ಅಂಶಗಳನ್ನು ಅಧಿಕಾರಿಗಳು ಜನರಿಗೆ ತಲುಪಿಸಬೇಕು. ನಬಾರ್ಡ್‌ನಿಂದ ರೈತರಿಗೆ ದೊರೆಯುತ್ತಿರುವ ಅಗತ್ಯ ನೆರವುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಬಿವೈಆರ್ ಹೇಳಿದರು.

ಸೂರ್ಯಘರ್ ಬೆಳಗಲಿ

ಕೇಂದ್ರ ಸರ್ಕಾರದ ಅತ್ಯುತ್ತಮ ಯೋಜನೆಯಾಗಿರುವ ಪಿಎಂ ಸೂರ್ಯಘರ್‌ಗೆ ಜಿಲ್ಲೆಯಲ್ಲಿ ಅಷ್ಟೊಂದು ಆಸಕ್ತಿ ಕಾಣುತ್ತಿಲ್ಲ. ಬಡ ವರ್ಗದವರಿಗೆ ಇದರ ಅನುಷ್ಠಾನ ಕೊಂಚ ದುಬಾರಿಯಾದರೂ ಮಧ್ಯಮ ವರ್ಗದವರು ಇದನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಇನ್ನಷ್ಟು ಪ್ರಚಾರ ನೀಡಬೇಕು. ಉಚಿತ ವಿದ್ಯುತ್ ಜತೆಗೆ ಗ್ರಿಡ್‌ಗೆ ವಿದ್ಯುತ್ ಪೂರೈಕೆ ಮಾಡುವುದರಿಂದ ಜನರು ಆದಾಯವನ್ನೂ ಗಳಿಸಬಹುದಾಗಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
"

ಸಂಸತ್‌ನಲ್ಲಿ ನಾನು ವಿಶ್ವಕರ್ಮ ಯೋಜನೆ ಬಗ್ಗೆ ಪ್ರಶ್ನೆ ಕೇಳಿದ್ದೆ. ಅಲ್ಲಿ ನೀಡಿದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಈ ಯೋಜನೆ ಹೆಚ್ಚು ಯಶಸ್ವಿಯಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಇದರ ಪ್ರಗತಿ ಅಷ್ಟೊಂದು ತೃಪ್ತಿಕರವಾಗಿಲ್ಲ. ಫಲಾನುಭವಿಗಳನ್ನು ಗುರುತಿಸಿ ತ್ವರಿತವಾಗಿ ಸಾಲ ಮಂಜೂರು ಮಾಡಬೇಕು.

— ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net