ಶಿವಾಜಿಯ ಕೆಚ್ಚೆದೆಯ ಹೋರಾಟ ಇತಿಹಾಸದ ಪಾಠದಲ್ಲಿರಬೇಕು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ

20sirsi2- History sammelana
Published on


ಶಿರಸಿ: ಸ್ವಾತಂತ್ರಾ ನಂತರದ ಹತ್ತು ವರ್ಷ ಆಡಳಿತ ಪರಕೀಯರ ಆಡಳಿತವನ್ನೂ ಮೀರಿಸುವಂತಿತ್ತು. ಹೀಗಾಗಿ, ಅವರಿಗೆ ಬೇಕಾದ ಇತಿಹಾಸವೇ ಪಠ್ಯದ ಪಾಠವಾಗಿದೆ. ಶಿವಾಜಿಯ ಕೆಚ್ಚೆದೆಯ ಹೋರಾಟದ ಇತಿಹಾಸ ನಮ್ಮ ವಿದ್ಯಾರ್ಥಿಗಳ ಪಾಠದಲ್ಲಿರಬೇಕೇ ಹೊರತು ಅಲೆಕ್ಸಾಂಡರ್ ದಾಳಿಯ ವೈಭವೀಕರಣದ ಅಗತ್ಯವಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ತಾಲೂಕಿನ ಸ್ವಾದಿ ದಿಗಂಬರ ಜೈನಮಠದಲ್ಲಿ ಭಾನುವಾರ ಇತಿಹಾಸ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
ಇತಿಹಾಸ ಅರಿಯದಿದ್ದರೆ ವರ್ತಮಾನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿಲ್ಲ, ಭವಿಷ್ಯದ ಕನಸು ಕಾಣಲು ಸಾಧ್ಯವಿಲ್ಲ. ಮುಂದಿನ ಇತಿಹಾಸ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹೆಚ್ಚು ಇರುವಂತಾಗಬೇಕು ಎಂದ ಅವರು, ಇತಿಹಾಸ ಸಮ್ಮೇಳನದಂತಹ ವೈಚಾರಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಕಷ್ಟದ ಕೆಲಸ. ಇತಿಹಾಸದ ಬಗ್ಗೆ ಜಾಗೃತಿ ಅತ್ಯಗತ್ಯ. ಸೋಂದಾಕ್ಕೆ ಒಂದನೇ ಶತಮಾನದಿಂದಲೇ ಇತಿಹಾಸವಿದೆ. ಸ್ಥಳೀಯ ರಾಜರ ಆಡಳಿತದ ಬಗ್ಗೆ ಅಧ್ಯಯನ ಮಾಡಿದಷ್ಟೂ ಸಮಾಜಕ್ಕೆ ಪ್ರೇರಣೆ. ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಮೂಡಿಸುತ್ತಿವೆ. ಸೋದೆ ರಾಜರು ಕೌಶಲದ ಜತೆ ಈ ಕ್ಷೇತ್ರ ಅಭಿವೃದ್ಧಿಪಡಿಸಿದ್ದಾರೆ. ಸೋದೆ ಅರಸರ ಸಾಮ್ರಾಜ್ಯ ವಿಜಯನಗರಕ್ಕೆ ಸರಿಸಮವಾಗಿ ಕೆಲಸ ಮಾಡಿದೆ ಎಂದರು.
ಬೇರೆ ಬೇರೆ ರೀತಿ ಸಾಧನೆ ಮಾಡಿದವರು ಇತಿಹಾಸದ ಪುಟದಲ್ಲಿ ಕಳೆದುಹೋಗಿದ್ದಾರೆ. ರಾಣಿ ಚೆನ್ನಭೈರಾದೇವಿ ಆಡಳಿತದ ವೈಖರಿ ಮಾದರಿಯಾಗಿತ್ತು. ಆದರೆ, ಜನಸಾಮಾನ್ಯರಿಗೆ ಇಂತಹ ಆಡಳಿತಗಾರರ ಹೆಸರೇ ಗೊತ್ತಿರುವುದಿಲ್ಲ. ನಮ್ಮ ಇತಿಹಾಸದಲ್ಲಿ ಬರೀ ದಾಳಿಕೋರರು, ಅವರ ಕಾನೂನುಗಳ ಬಗ್ಗೆ ಮಾತ್ರ ಓದುತ್ತಿದ್ದೇವೆ. ಇತಿಹಾಸದಲ್ಲಿ ಧ್ವಂಸ ಮಾಡಿದವರ ಬಗ್ಗೆ ಜಾಸ್ತಿ ಒತ್ತು ನೀಡಿದ್ದಾರೆ. ಇದರಿಂದಾಗಿ ನಮ್ಮತನ ನಮಗೆ ಗೊತ್ತಾಗುತ್ತಿಲ್ಲ ಎಂದರು.
ಸಮಾರೋಪ ಮಾತನಾಡಿದ ಹಂಪಿ ವಿಶ್ವ ವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಮರೇಶ ಯತಗಲ್, ಮೌಲ್ಯಯುತ ರಾಜರು ಆಳ್ವಿಕೆ ನಡೆಸಿರುವ ರಾಜ್ಯಗಳು ಆದರ್ಶದ ರಾಜ್ಯಗಳೆಂದು ಪರಿಗಣಿತವಾಗಿವೆ. ಇಂತಹ ಸಮ್ಮೇಳನಗಳು ಗೋಷ್ಠಿಗಳ ಮೂಲಕ ಅಂತಹ ರಾಜರ ಬಗ್ಗೆ ಜನಮಾನಸದಲ್ಲಿ ತುಂಬುವ ಕಾರ್ಯ ನಡೆಸಿವೆ. ಸ್ಥಳೀಯ ಇತಿಹಾಸ ರಾಷ್ಟಿ›ೕಯ ಇತಿಹಾಸಕ್ಕೆ ಭದ್ರ ಬುನಾದಿ. ಇಂದು ಸಂಶೋಧನೆಗಳನ್ನು ಗುರುತಿಸುವ ಮನಸುಗಳ ಕೊರತೆ ಕಾಡಿದೆ. ಸಂಶೋಧಕರಿಂದ ತಪ್ಪಾಗಬಹುದು, ಆದರೆ, ತಮ್ಮ ಸಂಶೋಧನೆಯಲ್ಲಿ ಸುಳ್ಳು ಪ್ರಕಟಿಸುವುದಿಲ್ಲ. ಇತಿಹಾಸ ವಿಭಾಗದಲ್ಲಿ ಪಿಎಚ್.ಡಿ ಪಡೆದರೆ ಪದವಿ ಪೂರ್ಣಗೊಂಡಿದೆ ಎಂಬ ಅರ್ಥವಲ್ಲ, ಆತ ಸಂಶೋಧನೆ ಮಾಡಲು ಯೋಗ್ಯ ಎಂಬ ಶಿಫಾರಸು ಪತ್ರ ಎಂದು ಪರಿಗಣಿಸಬೇಕು ಎಂದರು.
ಸಂಚಾಲಕ ಡಾ. ಲಕ್ಷ್ಮೀಶ ಸೋಂದಾ ಮಾತನಾಡಿ, ಸಮಾಜದಲ್ಲಿ ಇತಿಹಾಸದ ಬಗ್ಗೆ ಗಂಭೀರ ಚರ್ಚೆ ಆಗಬೇಕು. ಯುವ ಸಂಶೋಧಕರಿಗೆ ಕ್ರಿಯಾ ಜ್ಞಾನ ನೀಡುವಿಕೆ ಸಮ್ಮೇಳನಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ. ರಾಜಾರಾಮ ಹೆಗಡೆ, ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ರವೀಂದ್ರ ಧಾಕಪ್ಪ, ರತ್ನಾಕರ ಹೆಗಡೆ ಬಾಡಲಕೊಪ್ಪ, ಸೋಂದಾ ಗ್ರಾಪಂ ಅಧ್ಯಕ್ಷ ರಾಮಚಂದ್ರ ಹೆಗಡೆ ಹೊಸಗದ್ದೆ, ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಜೈನ ಮಠದ ಕಾರ್ಯದರ್ಶಿ ಸುರೇಖಾ ಸೂರ್ಯವಂಶಿ, ರಾಜರಾಜೇಶ್ವರಿ ಯುವಕ ಮಂಡಳದ ಅಧ್ಯಕ್ಷ ಪ್ರಶಾಂತ ಹೆಗಡೆ ಬಾಡಲಕೊಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net