ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ಪ್ರಬಲ

Anantamurty Hegade
Published on

ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಹೋರಾಟ ಮಾಡಿದ್ದೇವೆ. ಆದರೆ, ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟವನ್ನು ಪ್ರಬಲಗೊಳಿಸಲಿದ್ದೇವೆ ಎಂದು ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹೋರಾಟ ಹಾಗೂ ಪಾದಯಾತ್ರೆ ಹಮ್ಮಿಕೊಂಡು ಸರ್ಕಾರವನ್ನು ಎಚ್ಚರಿಸಲಾಗಿದೆ. ಅಲ್ಲದೆ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರನ್ನು ಭೇಟಿಯಾಗಿ ವಿನಂತಿಸಲಾಗಿತ್ತು. ಆದರೆ, ಅವರು ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಮಾತ್ರ ನೀಡಲಾಗುತ್ತದೆ ಎಂದು ತಿಳಿಸಿದ್ದರು. ಈ ಕಾರಣದಿಂದ ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕು. ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ವೇಗ ನೀಡಲು ಘಟ್ಟದ ಮೇಲಿನ ಸಮಾನ ಮನಸ್ಕರ ಸಂಘಟನೆಗಳ ಬೆಂಬಲ ಯಾಚಿಸಿದ್ದೇವೆ. ಅವರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ, ಬೆಂಬಲ ಸೂಚಿಸಿದ್ದಾರೆ ಶಿರಸಿಯಲ್ಲಿ 250 ಹಾಸಿಗೆಯ ಹೈಟೆಕ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಮೆಡಿಕಲ್ ಕಾಲೇಜು ಇದ್ದಾಗ ನುರಿತ ವೈದ್ಯರು ಉಪನ್ಯಾಸಕರಾಗಿ ಬರುತ್ತಾರೆ. ಆದ್ದರಿಂದ ವೈದ್ಯರ ಕೊರತೆ ತಪ್ಪಲಿದೆ ಎಂದರು.

ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಪುನಃ ಶಕ್ತಿ ತುಂಬುವ ದೃಷ್ಟಿಯಿಂದ ಹಿಂದೆ ಹೋರಾಟ ಮಾಡಿರುವವರನ್ನು ಸಂಪರ್ಕಿಸಿದ್ದೇನೆ. ಶಾಸಕ ಭೀಮಣ್ಣ ನಾಯ್ಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪೇಂದ್ರ ಪೈ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳನ್ನು ಸಂಪರ್ಕಿಸಿದ್ದೇನೆ. ಘಟ್ಟದ ಮೇಲಿನ ಎಲ್ಲ ತಾಲೂಕಿನ ವಿವಿಧ ಸಂಘಟನೆಗಳನ್ನು ಸಂಪರ್ಕಿಸಿ, ಪಕ್ಷಾತೀತ ಹೋರಾಟ ಮಾಡುತ್ತಿದ್ದೇನೆ. ಯಲ್ಲಾಪುರ, ಸಿದ್ದಾಪುರ, ಮುಂಡಗೋಡ, ಜೊಯಿಡಾ, ಹಳಿಯಾಳ, ದಾಂಡೇಲಿ ತಾಲೂಕುಗಳಿಗೆ ಭೇಟಿ ನೀಡಿ, ಸಂಪರ್ಕ ಮಾಡುತ್ತೇನೆ ಎಂದರು.

ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ಎಂ.ಎಂ.ಭಟ್ಟ ಕಾರೇಕೊಪ್ಪ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಶಿರಸಿ ಜಿಲ್ಲೆಯಾಗಬೇಕು ಎಂದು ಸರ್ಕಾರದ ಮೇಲೆ ಒತ್ತಡ ತಂದಿದ್ದೇವೆ. ಸಮಾಜದ ಪ್ರತಿಯೊಬ್ಬರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಮೆಡಿಕಲ್ ಹಾಗೂ ಇಂಜಿನಿಯರ್ ಕಾಲೇಜು ಬರಬೇಕು. ಈ ಹೋರಾಟದಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ನಿವೃತ್ತ ಸರ್ಕಾರಿ ನೌಕರ ವಿ.ಎಂ. ಭಟ್ಟ ಮಾತನಾಡಿ, ಘಟ್ಟದ ಮೇಲಿನ ನೌಕರರಲ್ಲಿ ಶಿರಸಿ ಜಿಲ್ಲೆಯಾಗಬೇಕು ಎಂಬ ಭಾವನೆ ಇದೆ. ಶಿರಸಿಗೆ ಜಿಲ್ಲೆಯ ಸ್ಥಾನಮಾನ ಸಿಗಬೇಕು ಎಂಬುದು ಹಿರಿಯ ಅಧಿಕಾರಿಗಳ ಆಶಯವಾಗಿದೆ. ಶಿರಸಿ ಜಿಲ್ಲೆಯಾದರೆ ಕಚೇರಿಗಳಿಗೆ ಜಾಗದ ಸಮಸ್ಯೆಯೂ ಇಲ್ಲ. ಜಿಲ್ಲೆ ಘೋಷಣೆ ವೆಚ್ಚದಾಯಕವೂ ಅಲ್ಲ. ಆರ್ಥಿಕ ಹಾಗೂ ಮೂಲಭೂತ ಸಮಸ್ಯೆಗಳಿಲ್ಲ. ಈ ಕಾರಣ ಶಿರಸಿ ಜಿಲ್ಲೆಯಾಗಲು ಸೂಕ್ತವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎನ್.ಹೆಗಡೆ ದೊಡ್ನಳ್ಳಿ, ಸಿ.ಎಸ್.ಗೌಡ ಸಿದ್ದಾಪುರ, ಶೋಭಾ ನಾಯ್ಕ, ಶಿವಾನಂದ ದೇಶಳ್ಳಿ, ದೀಪಕ ಕಾನಡೆ, ಸಂತೋಷ ನಾಯ್ಕ ಬ್ಯಾಗದ್ದೆ, ಚಿದಾನಂದ ಹರಿಜನ, ಗಣಪತಿ ನಾಯ್ಕ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net