ಸಂಭಾಷಣೆಯಿಂದಷ್ಟೇ ಭಾಷೆಯ ರಕ್ಷಣೆ ಸಾಧ್ಯ...

Sanskrit 1
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಸಂಸ್ಕೃತೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಶಾಲಾ ಅಧ್ಯಯನದಿಂದ ಮಾತ್ರ ಸಂಸ್ಕೃತ ಭಾಷೆಯ ಉಳಿವು, ಉನ್ನತಿ ಅಸಾಧ್ಯ. ಸಂಭಾಷಣೆಯಿಂದ ಮಾತ್ರ ಆ ಭಾಷೆಯ ರಕ್ಷಣೆ ಸಾಧ್ಯ. ಹೀಗಾಗಿ ಎಲ್ಲ ಸಂಸ್ಕೃತ ವಿದ್ಯಾರ್ಥಿಗಳು ಸಂಸ್ಕೃತದಲ್ಲಿಯೇ ವ್ಯವಹರಿಸುವಂತಾಗಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶಿಸಿದರು.

ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ ಮತ್ತು ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ ಉಡುಪಿ ಜಿಲ್ಲೆ ಆಶ್ರಯದಲ್ಲಿ ಜುಲೈ 27ರಂದು ಆಯೋಜಿಸಿದ್ದ ಸಂಸ್ಕೃತೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಭಾಷಾ ರಾಜಕೀಯ

ಡಯಟ್​ ಪ್ರಾಂಶುಪಾಲ ಡಾ.ಅಶೋಕ ಕಾಮತ ಮಾತನಾಡಿ, ಭಾಷಾ ರಾಜಕೀಯದಿಂದಾಗಿ ಆಯಾ ಸಂದರ್ಭದಲ್ಲಿ ಬೇರೆ ತಿರುವು ಪಡೆಯುತ್ತವೆ. ಈ ಹಿಂದೆ ರಾಜಾಶ್ರಯವಿದ್ದ ಸಂಸ್ಕೃತವನ್ನು ದೂರು ಮಾಡುವ ಹಾಗೂ ದೂರುವ ಸ್ಥಿತಿಯಿದೆ. ಇದೀಗ ರಾಜ್ಯದಲ್ಲಿ ದ್ವಿಭಾಷಾ ನೀತಿ ಬರುತ್ತಿದ್ದು ಅದರಿಂದಾಗಿ ಪ್ರಥಮವಾಗಿ ಕನ್ನಡ ಭಾಷೆ ಕಡ್ಡಾಯ, ದ್ವಿತೀಯವಾಗಿ ಇಂಗ್ಲಿಷ್​ ಭಾಷೆಯೇ ಆಯ್ಕೆಯಾಗುತ್ತದೆ. ಇದರಿಂದ ಸಂಸ್ಕೃತ ಮರೆಯಾಗಲಿದೆ. ಅಂಕಗಳಿಕೆಯೇ ಜೀವನದ ಉದ್ದೇಶವಾಗಬಾರದು ಎಂದರು.

ಹೆತ್ತವರ ಮರೆತರೆ ಮಹಾಪಾಪ

ಹಿರಿಯ ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ ಮಾತನಾಡಿ, ಜ್ಞಾನ ಮತ್ತು ಶಿಕ್ಷಣವೇ ಜೀವನದ ಮೂಲ ಮಂತ್ರ. ವಿದ್ಯಾರ್ಜನೆಯೊಂದಿಗೆ ಸತ್ಯ, ಧರ್ಮ, ನ್ಯಾಯ, ವಾಸ್ತವ ಮಾರ್ಗದಲ್ಲಿ ಸಾಗಬೇಕು. ರಾಮನ ನಡೆ, ಕೃಷ್ಣನ ನುಡಿ ಅಳವಡಿಸಿಕೊಂಡರೆ ಜೀವನವೇ ಪಾವನವಾಗುತ್ತದೆ. ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತಾಯಿ ಎಂದರೆ ವ್ಯಕ್ತಿತ್ವವಲ್ಲ, ಅದೊಂದು ಶಕ್ತಿ. ತಂದೆಯೆಂದರೆ ಭರವಸೆ. ಜೀವನಪರ್ಯಂತ ಅವರನ್ನು ಸ್ಮರಿಸಸಬೇಕು. ಅವರನ್ನು ಮರೆತರೆ ಅದುವೇ ಮಹಾಪಾಪ ಎಂದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Sanskrit 2
ಸಂಸ್ಕೃತ ಪ್ರಥಮ ಭಾಷೆಯಲ್ಲಿ 125 ಅಂಕಗಳಿಸಿದ ಉಡುಪಿ ಜಿಲ್ಲೆಯ ಸಾಧಕ 222 ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ಅಭ್ಯಸಿಸಿ 625ಕ್ಕೆ 624 ಅಂಕ ಗಳಿಸಿದ ಉಡುಪಿ ಜಿಲ್ಲೆಯ ನಿಧಿ ಪೈ ಎಂ., ಸ್ವಸ್ತಿ ಕಾಮತ, ಸುಶ್ಮಿತಾ ಎಸ್​. ಗಾಣಿಗ ಅವರನ್ನು ಶ್ರೀಗಳು ಸನ್ಮಾನಿಸಿದರು.

ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಹಿತವಚನ ನುಡಿದರು. ಸಂಸ್ಕೃತ ಭಾರತೀ ಮಂಗಳೂರಿನ ಮುಖ್ಯಸ್ಥ ಡಾ. ಎಚ್​.ಆರ್​. ವಿಶ್ವಾಸ ವಿಶೇಷ ಉಪನ್ಯಾಸ ನೀಡಿದರು.

ಡಿಡಿಪಿಐ ಲೋಕೇಶ ಸಿ., ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ, ಜಂಗಮ ಮಠದ ಡಾ. ನಿರಂಜನ ಯು.ಸಿ. ಮಾತನಾಡಿದರು. ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತಕಾರ್ಯದರ್ಶಿ ರತೀಶ ತಂತ್ರಿ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​ ಉಪಸ್ಥಿತರಿದ್ದರು.

ಗಾನ-ವ್ಯಾಖ್ಯಾನ ಕಾರ್ಯಕ್ರಮ

ಸಮಾರಂಭದ ಆರಂಭಕ್ಕೂ ಮೊದಲು ವಿದ್ಯಾರ್ಥಿಗಳಿಗೆ ರಾಮಾಯಣದ ಮಾಹಿತಿ ನೀಡಲು ರಾಮ ನಿರ್ಯಾಣ ಗಾನ-ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ವಿದ್ವಾನ್​ ಶಂಭು ಭಟ್​ ಕೋಟ ಗಾನ, ಡಾ. ರಾಘವೇಂದ್ರ ರಾವ್​ ಪಡುಬಿದ್ರಿ ವ್ಯಾಖ್ಯಾನದ ಮೂಲಕ ಮಕ್ಕಳಿಗೆ ರಾಮಾಯಣದ ದೃಶ್ಯ ಕಟ್ಟಿಕೊಟ್ಟರು.

ನಿವೃತ್ತ ಶಿಕ್ಷಕ ವಿದ್ವಾನ್​ ನಟರಾಜ ಪ್ರಾರ್ಥಿಸಿದರು. ಉಡುಪಿ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಅಧ್ಯಕ್ಷ ವಿದ್ವಾನ್​ ಪ್ರಭಾಕರ ಭಟ್​ ಇನ್ನಂಜೆ ಸ್ವಾಗತಿಸಿದರು. ವಿದ್ವಾನ್​ ಅಶೋಕ ಹೆಗಡೆ ವಂದಿಸಿದರು. ವಿದ್ವಾನ್​ ವೇದವ್ಯಾಸ ತಂತ್ರಿ ಮಡಾಮಕ್ಕಿ ಕಾರ್ಯಕ್ರಮ ನಿರೂಪಿಸಿದರು.

ಮುಂದೆ ಯಾವುದೇ ಕೋರ್ಸ್​ಗೆ ಹೋದರೂ ಸಂಸ್ಕೃತ ಜತೆಯಲ್ಲಿರಲಿ. ಯಾವುದೇ ಕ್ಷೇತಕ್ಕೆ ಹೋದರೂ, ಸಂಶೋಧನೆ ಮಾಡುವುದಿದ್ದರೂ ಮೂಲವಾದ ಸಂಸ್ಕೃತದ ಸಹಾಯವೇ ಬೇಕಾಗುತ್ತದೆ. ಹೀಗಾಗಿ ಈಗಿನಿಂದಲೇ ಗಟ್ಟಿಯಾಗಿ ಸಂಸ್ಕೃತವನ್ನು ಹಿಡಿದು ಸಾಗಿದರೆ ಮುಂದಿನ ಭವಿಷ್ಯ ಹೊಳೆಯುತ್ತದೆ, ಅನ್ಯರಿಗೂ ಅದು ಬೆಳಕು ನೀಡುತ್ತದೆ. | ಡಾ. ಎಚ್​.ಆರ್​. ವಿಶ್ವಾಸ. ಸಂಸ್ಕೃತ ಭಾರತೀ ಮಂಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net