ಕಳಸ ಹಿಂದು ರುದ್ರಭೂಮಿಗೆ 7 ಲಕ್ಷ ರೂ. ನೆರವು

kls1 (13)
Published on

ಕಳಸ: ಆಸರೆ ಫೌಂಡೇಷನ್‌ನಿಂದ ಕಳಸ ಹಿಂದು ರುದ್ರಭೂಮಿಗೆ ಅನಿಲ ಚಾಲಿತ ಶವ ಸುಡುವ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.

ಕಳಸ ಸಾರ್ವಜನಿಕ ಸೌಹಾರ್ದ ಶ್ರೀಗಣೇಶೋತ್ಸವ ಸಮಿತಿಯಿಂದ ನಡೆಯುತ್ತಿರುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ರಾಜ್ ಬಿ.ಶೆಟ್ಟಿ, ರಕ್ಷಿತ್ ಶೆಟ್ಟಿ, ರವಿ ರೈ ಸಾರಥ್ಯದ ಆಸರೆ ಫೌಂಡೇಷನ್‌ನಿಂದ ಫೌಂಡೇಷನ್ ಮುಖ್ಯಸ್ಥ ಬಿ.ವಿ.ರವಿ ರೈ 7 ಲಕ್ಷ ರೂ. ಮೊತ್ತದ ಚೆಕ್‌ನ್ನು ಹಿಂದು ರುದ್ರಭೂಮಿ ಸಮಿತಿಗೆ ಹಸ್ತಾಂತರಿಸಿದರು.

ಪತ್ರಕರ್ತ ರವಿ ಕೆಳಂಗಡಿ ಮಾತನಾಡಿ, ಒಂದೆರೆಡೆ ಸಾವಿರ ದೇಣಿಗೆ ಕೊಟ್ಟು ಸಾಕಷ್ಟು ಪ್ರಚಾರ ಪಡೆಯವವರ ಮಧ್ಯೆ ಇಂತಹ ವ್ಯಕ್ತಿಗಳು ನಿಜವಾಗಿ ಶ್ರೇಷ್ಠರಾಗುತ್ತಾರೆ. ಊರಿನಲ್ಲಿ ಸಾಕಷ್ಟು ಶ್ರೀಮಂತರಿದ್ದರೂ ಕೂಡ ಸಮಾಜಕ್ಕಾಗಿ ಸೇವೆ ಮಾಡುವವರು ವಿರಳವಾಗಿದ್ದಾರೆ ಎಂದು ಹೇಳಿದರು.

ಫೌಂಡೇಷನ್ ಮುಖ್ಯಸ್ಥ ರವಿ ರೈ ಮಾತನಾಡಿ, ಬಾಳೆಹೊಳೆಯಲ್ಲಿ ಶವಗಳ ಅಂತ್ಯ ಸಂಸ್ಕಾರಕ್ಕೆ ಸ್ಥಳವಿಲ್ಲದೆ ಸಮಸ್ಯೆಯ ಬಗ್ಗೆ ಸಂಸ್ಕಾರಕ್ಕೆ ಜಾಗ ಇಲ್ಲದೆ ಇರುವುದು ನನ್ನ ತಂದೆ ಸಾವಿನ ಸಂದರ್ಭದಲ್ಲಿ ನನಗೆ ಅರಿವಾಗಿತ್ತು. ಅಲ್ಲಿ ಸ್ಮಶಾನಕ್ಕೆ ಜಾಗ ನೀಡಿದರೆ ಅಲ್ಲಿಗೆ ಶವ ಸುಡುವ ಯಂತ್ರ ಕೊಡುವ ಯೋಚನೆ ಇದೆ. ನಮ್ಮ ಫೌಂಡೇಷನ್‌ನಿಂದ ಈಗಾಗಲೇ ಕಳಸ ಮತ್ತು ಸಂಸೆಗೆ ಎರಡು ಅಂಬುಲೆನ್ಸ್ ನೀಡಲಾಗಿದೆ. ಹಿರೇಬೈಲ್‌ಗೆ ಶವ ಸುಡಲು ಸಲಕರಣೆ, ಕಳಸದ ಇಬ್ಬರು ಅಂಗವಿಕಲರಿಗೆ ಮೂರು ಚಕ್ರದ ಸ್ಕೂಟಿ ನೀಡಲಾಗಿದೆ. ಈ ಬಾರಿ ಕಳಸ ರುದ್ರಭೂಮಿಗೆ ಅನಿಲ ಚಾಲಿತ ಶವ ಸುಡುವ ಯಂತ್ರ ನೀಡಲಾಗುತ್ತಿದೆ ಎಂದು ಹೇಳಿದರು.

ಗಣೇಶೋತ್ಸವ ಸಮಿತಿ ಗೌರವ ಕಾರ್ಯದರ್ಶಿ ಬ್ರಹ್ಮದೇವ, ಕಳಸ ಗ್ರಾಪಂ ಉಪಾಧ್ಯಕ್ಷ ಕೆ.ಕೆ.ಭಾಸ್ಕರ ಗೌಡ, ವಿಶ್ವ ಮಾನವ ಟ್ರಸ್ಟ್ ಅಧ್ಯಕ್ಷ ಸುದೀಶ್ ಸುವರ್ಣ, ರುದ್ರಭೂಮಿ ಸಮಿತಿ ಅಧ್ಯಕ್ಷ ರುದ್ರಯ್ಯ ಆಚಾರ್, ಸದಸ್ಯರಾದ ಉಮೇಶ್, ಸುನೀಲ್, ಜ್ವಾಲನಯ್ಯ, ಪ್ರಭಾಕರ ಭಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net