ಉಪಚುನಾವಣೆ ಘೋಷಣೆ ಬೆನ್ನಲ್ಲೇ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಡಿ.ಕೆ. ರವಿ ಪತ್ನಿ..!

DK Ravi
Published on

ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ದಿವಂಗತ ಡಿ.ಕೆ. ರವಿ ಪತ್ನಿ ಕುಸುಮಾ ಅವರು ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ತಂದೆ ಹನುಮಂತರಾಯಪ್ಪ ಜತೆ ಕುಸುಮಾ ಅವರಿಂದು ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದರು. ತಂದೆ ಮತ್ತು ಮಗಳು ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಉಪಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ತಂದೆ-ಮಗಳ ಭೇಟಿ ಮಹತ್ವ ಪಡೆದುಕೊಂಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಅಂದಹಾಗೆ ರಾಜರಾಜೇಶ್ವರಿ ನಗರದಿಂದ ತಂದೆ ಅಥವಾ ಪುತ್ರಿ ಚುನಾವಣೆಗೆ ಇಳಿಯುವ ಮಾತುಗಳು ಕೇಳಿಬರುತ್ತಿವೆ.

ಇನ್ನು ಕುಸುಮಾ ಅವರು ಆರ್​ಆರ್​ ನಗರದಿಂದ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಆದರೆ, ಕಾಂಗ್ರೆಸ್​ ಪಕ್ಷದಲ್ಲಿ ದಿನಕೊಂದು ಹೆಸರು ಚರ್ಚೆಯಾಗುತ್ತಿದೆ. ಹನುಮಂತರಾಯಪ್ಪ, ಕುಸುಮಾ, ಪ್ರಿಯಾಕೃಷ್ಣ ಮತ್ತು ರಕ್ಷಾ ರಾಮಯ್ಯ ಹೆಸರು ಚಾಲ್ತಿಯಲ್ಲಿದೆ.

ಟಿಕೆಟ್ ಕೊಟ್ಟರೆ ಪಕ್ಷದಿಂದ ಚುನಾವಣೆ ಖರ್ಚು ಕೇಳಲ್ಲ ಎಂದು ರಕ್ಷಾ ರಾಮಯ್ಯ ಪಕ್ಷದ ಮುಂದೆ ಆಫರ್ ಇಟ್ಟಿದ್ದಾರೆನ್ನಲಾಗಿದೆ. ಅಂದಹಾಗೆ ರಕ್ಷಾ ರಾಮಯ್ಯ ಮಾಜಿ ಸಚಿವ ಎಂಆರ್ ಸೀತಾರಾಂ ಮಗ. ಅಲ್ಲದೆ, ಕೆಪಿಸಿಸಿ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದು, ಆರ್​ಆರ್ ನಗರ ಟಿಕೆಟ್​ಗೆ ಬಾರಿ ಪೈಪೋಟಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net