ಇಂದಿನಿಂದ ಸಂಭ್ರಮದ ರತ್ನಪುರಿ ಜಾತ್ರೆ

SRI ANJANEYA SWAMY IDOL
ಹುಣಸೂರು ತಾಲೂಕು ರತ್ನಪುರಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿರುವ ಶ್ರೀ ಆಂಜನೇಯಸ್ವಾಮಿ ಮೂರ್ತಿ
Published on

ಹುಣಸೂರು: ಹಳೆ ಮೈಸೂರು ಪ್ರಾಂತ್ಯದಲ್ಲಿ ಹಿಂದು-ಮುಸ್ಲಿಂ ಸಮುದಾಯದ ಭಾವೈಕ್ಯತೆಯ ಸಂಕೇತವೆಂದೇ ಪ್ರತೀತಿ ಪಡೆದಿರುವ ರತ್ನಪುರಿ(ದರ್ಗಾ)ಯ ಶ್ರೀ ಆಂಜನೇಯಸ್ವಾಮಿಯ 60ನೇ ವರ್ಷದ ಮಹಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ಜಮಾಲಮ್ಮನವರ ಉರುಸ್ ಮತ್ತು ಗಂಧೋತ್ಸವ ಫೆ.16ರಿಂದ ಮೂರು ದಿನ ನಡೆಯಲಿದೆ.

ಹುಣಸೂರು ನಗರದಿಂದ ಆಗ್ನೇಯ ದಿಕ್ಕಿನಲ್ಲಿ 16 ಕಿ.ಮೀ.ದೂರದಲ್ಲಿರುವ ರತ್ನಪುರಿ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಮತ್ತು ಜಮಾಲಮ್ಮಬೀಬಿ ವಿರಾಜಮಾನರಾಗಿದ್ದು, ತಲತಲಾಂತರಗಳಿಂದ ಎರಡೂ ಸಮುದಾಯದವರು ಎರಡೂ ದೇವರನ್ನು ನಂಬಿ ಪೂಜಿಸುತ್ತಿದ್ದಾರೆ. ಸೌಹಾರ್ದತೆಯು ಕಣ್ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಸೌಹಾರ್ದತೆಯೇ ಮೈವೆತ್ತಂತೆ ಇಲ್ಲಿ ಉತ್ಸವಗಳು ಆಚರಿಸಲ್ಪಿಡುತ್ತಿದ್ದು, ಎಲ್ಲರ ಮನದಲ್ಲಿ ನಾನು ಎನ್ನುವುದನ್ನು ತೊರೆದು ನಾವು ಎನ್ನುವ ಭಾವನೆಯನ್ನು ಮೂಡಿಸುವಲ್ಲಿ ರತ್ನಪುರಿ ಜಾತ್ರೆ ಯಶಸ್ಸು ಸಾಧಿಸುತ್ತಿದೆ.

ಕೋಟೆ ರಕ್ಷಕ ಆಂಜನೇಯಸ್ವಾಮಿ: ವಿಜಯನಗರ ಸಾಮ್ರಾಜ್ಯದ ಆಳ್ವಿಕೆ ಕಾಲದಲ್ಲಿ ಈ ಭಾಗದಲ್ಲಿ ರಾಜನಾಗಿ ಆಡಳಿತ ನಡೆಸುತ್ತಿದ್ದ ರತ್ನಶೇಖರನ ತದನಂತರ ಆತನ ಪುತ್ರ ವಜ್ರಮಕುಟ ರತ್ನಪುರಿಯ ವೈಭವಕ್ಕೆ ಕಾರಣಕರ್ತನಾಗುತ್ತಾನೆ. ರತ್ನಪುರಿಯ ಪೂರ್ವ ದಿಕ್ಕಿನಲ್ಲಿ ವಿಶಾಲ ಅರಮನೆ ಕಟ್ಟಿ ಏಳು ಸುತ್ತಿನ ಕೋಟೆ ನಿರ್ಮಿಸುತ್ತಾನೆ. ಆದರೆ ಇದೀಗ ಆಎಲ್ಲ ಕೋಟೆಗಳು ನಾಮಾವೇಶವಾಗಿದೆ. ಈಗಲೂ ಗ್ರಾಮದಲ್ಲಿರುವ ದೇವಿಕೆರೆ ಮತ್ತು ಸಂತೆಕೆರೆ ಈತನೇ ಕಟ್ಟಿಸಿದ್ದಿರಬಹುದೆಂಬುದು ಇತಿಹಾಸಕಾರರ ಮಾತು. ಆ ಕಾಲದಲ್ಲಿ ಕೋಟೆಯ ಮುಖ್ಯ ದ್ವಾರದಲ್ಲಿ ಆಂಜಯೇಸ್ವಾಮಿ ದೇವಾಲಯವನ್ನೂ ನಿರ್ಮಿಸಿದ್ದರು.

ಕಾಲಾನಂತರದಲ್ಲಿ ಊರಿನ ಜನರು ಆಂಜನೇಯಸ್ವಾಮಿಯನ್ನು ಕೋಟೆ ರಕ್ಷಕನೆಂದೇ ಆರಾಧಿಸಲು ಆರಂಭಿಸಿದರು. ನಂಬಿಕೆ ಮತ್ತು ಶಕ್ತಿಗೆ ಹೆಸರಾಗಿ ಆಂಜನೇಯಸ್ವಾಮಿ ಇಲ್ಲಿ ಇಂದಿಗೂ ಭಕ್ತರ ಆಶ್ರಿತನಾಗಿ ಮೆರೆಯುತ್ತಿದ್ದಾನೆ. ರತ್ನಪುರಿ ಸುತ್ತಮುತ್ತಲ ಗ್ರಾಮದ ನೆರವಿನಿಂದ ಕೊಂಡೋತ್ಸವ ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.

ಜಮಾಲ್ ಬೀಬಿ ಎಲ್ಲರ ಜಮಾಲಮ್ಮ: ಅಂದಿನ ಕಾಲದಲ್ಲಿ ರಾಜಮಹಾರಾಜರ ನಡುವಿನ ವೈಮನಸ್ಯ ಮತ್ತು ನಂಬಿಕೆಗಳ ನಡುವೆ ರಾಜಮನೆತನದ ಹೆಣ್ಣುಮಗಳೊಬ್ಬಳ ದಾರುಣ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ ಫಕೀರನೇ ಜಮಾಲಮ್ಮನ ಸೃಷ್ಟಿಗೆ ಕಾರಣಕರ್ತ. ಫಕೀರ ರತ್ನಪುರಿಯಲ್ಲಿ ಜಮಾಲಮ್ಮನ ಹೆಸರಿನಲ್ಲಿ ಗೋರಿ ಕಟ್ಟಿಸಿ ಚಾದರ ಹೊದೆಸಿ ಪ್ರಾರ್ಥನೆ ಸಲ್ಲಿಸಲು ಆರಂಭಿಸುತ್ತಾನೆ. ಕಾಲಕ್ರಮೇಣ ಈ ಗೋರಿ ಬೆಳೆಯುತ್ತ ಬಂತು.

ಈಗಲೂ ಸಮಾಧಿ ಬಳಿಯಲ್ಲಿರುವ ಆಲದ ಮರ ಸಮಾಧಿಗೆ ನೆರಳಾಗಿ ಬೆಳೆಯುತ್ತಲೇ ಇದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಕಾಲಾನಂತರದಲ್ಲಿ ಈ ಭಾಗದ ಹಿಂದುಗಳು ಕೂಡ ಗೋರಿಗೆ ನಮಿಸಿ ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳುವ ಮತ್ತು ಭಕ್ತಿ ಭಾವದಿಂದ ಪೂಜಿಸುವ ಕಾರ್ಯ ಮುಂದುವರಿಸಿದ್ದಾರೆ.
ಜಮಾಲ್ ಬೀಬಿ ಎಲ್ಲರ ಜಮಾಲಮ್ಮ ಆಗಿದ್ದಾರೆ. ಜಾತ್ರೆಯ ಎರಡನೇ ದಿನ ಆಂಜನೇಯಸ್ವಾಮಿಯ ಪಲ್ಲಕ್ಕಿ ಉತ್ಸವದಲ್ಲಿ ಇತರ ಜಿಲ್ಲೆಗಳಿಂದ ಆಗಮಿಸುವ ಮುಸ್ಲಿಮರು ಪಾಲ್ಗೊಂಡು ಹನುಮನ ದರ್ಶನ ಪಡೆದರೆ, ಜಾತ್ರೆಯ ಮೂರನೇ ದಿನ ಆಯೋಜನೆಗೊಳ್ಳುವ ಜಮಾಲಮ್ಮನ ಗಂಧೋತ್ಸವ ಮತ್ತು ಉರುಸ್‌ನಲ್ಲಿ ಹಿಂದುಗಳು ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಆ ಮೂಲಕ ಸೌಹಾರ್ದತೆ, ಸಾಮರಸ್ಯದ ಪ್ರತೀಕವಾಗಿ ಜಾತ್ರೆ ಎಲ್ಲ ಮನೆ, ಮನಗಳನ್ನು ಗೆದ್ದಿದೆ ಎನ್ನುತ್ತಾರೆ ಮುಸ್ಲಿಂ ಮುಖಂಡ ಅಜ್ಗರ್ ಪಾಷ.

60 ವರ್ಷಗಳಿಂದ ಜಾತ್ರಾ ಮಹೋತ್ಸವ ಮತ್ತು ಉರುಸ್ ಆಚರಣೆ ಶ್ರದ್ಧಾಭಕ್ತಿ ಮತ್ತು ಸಾಮರಸ್ಯದಿಂದ ಆಚರಿಸಲಾಗುತ್ತಿದೆ. ಎಲ್ಲರಿಗೂ ಸನ್ಮಂಗಳವನ್ನು ಉಂಟುಮಾಡಲಿ ಎನ್ನುವುದೇ ಆಂಜನೇಯಸ್ವಾಮಿ ಜಾತ್ರಾ ಸೇವೇ ಸಮಿತಿಯ ಆಶಯ. ಹಿಂದು ಮತ್ತು ಮುಸ್ಲಿಮರು ಜಾತ್ರಾ ಮಹೋತ್ಸವ ಮತ್ತು ಗಂಧೋತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ನಮ್ಮೂರಿನ ಈ ಜಾತ್ರೆ ನಮ್ಮೆಲ್ಲರ ಹೆಮ್ಮೆ.
ಆರ್.ಪ್ರಭಾಕರ್ ಅಧ್ಯಕ್ಷ, ಶ್ರೀ ಆಂಜನೇಯಸ್ವಾಮಿ ಜಾತ್ರಾ ಸಮಿತಿ, ರತ್ನಪುರಿ

ಎರಡೂ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಸಾರುವ ಉತ್ಸವವನ್ನು ಶತಮಾನಗಳಿಂದ ಆಚರಿಸಲಾಗುತ್ತಿದೆ. ಮೇಲು-ಕೀಳು ಎನ್ನುವ ಭಾವನೆ ತೊರೆಯುವ ಕಾಲ ಸನ್ನಿಹಿತವಾಗಿದೆ. ನಾನು ಎನ್ನುವ ಅಹಂಕಾರ ಅಳಿದು ನಾವು ಎನ್ನುವ ಭಾವನೆಯಿಂದ ಜೀವನ ನಡೆಸುವುದು ಇಂದಿನ ಅಗತ್ಯ. ಅದಕ್ಕೆ ಇಂತಹ ಉತ್ಸವಗಳೇ ಮುಖ್ಯ ವೇದಿಕೆಯಾಗಲಿ. ರಾಜ್ಯಕ್ಕೆ ಮಾದರಿಯಾಗಿರುವ ರತ್ನಪುರಿ ಉತ್ಸವ ಯಶಸ್ಸು ಸಾಧಿಸಲಿ.
ಕೃಷ್ಣ ಉದ್ಯಮಿ, ಹುಣಸೂರು

ಕಾರ್ಯಕ್ರಮಗಳ ವಿವರ:
ಫೆ.16ರಂದು ಬೆಳಗ್ಗೆ 6.30ಕ್ಕೆ ಆಂಜನೇಯಸ್ವಾಮಿಗೆ ಹೋಮ, ಹವನ ಮತ್ತು ಮಹಾಭಿಷೇಕ, ಮಧ್ಯಾಹ್ನ, 3ಕ್ಕೆ ಪುರುಷ ಮತ್ತು ಮಹಿಳೆಯರ ರಾಜ್ಯಮಟ್ಟದ ಹಗ್ಗಜಗ್ಗಾಟ ಪಂದ್ಯಾವಳಿ.
ಫೆ.17ರಂದು ಬೆಳಗ್ಗೆ ಆಂಜನೇಯಸ್ವಾಮಿಗೆ ವಿಶೇಷ ಪೂಜಾಕೈಂಕರ್ಯ, ಮಹಾಮಂಗಳಾರತಿ, ಮಧ್ಯಾಹ್ನ 12ರಿಂದ 3ರವರೆಗೆ ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಆಂಜನೇಯಸ್ವಾಮಿಯ ಪಲ್ಲಕ್ಕಿ ಉತ್ಸವ, ವಿವಿಧ ಜಾನಪದ ಕಲಾತಂಡಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಜಾತ್ರಾ ಮೆರವಣಿಗೆ.
ಫೆ.18ರಂದು ಸಂಜೆ 7 ಗಂಟೆಗೆ ಗ್ರಾಮದೇವತೆ ಜಮಾಲಮ್ಮನವರ ಉರುಸ್ ಮತ್ತು ಗಂಧೋತ್ಸವ, ರಾತ್ರಿ 8 ಗಂಟೆಗೆ ಶ್ರೀ ಅಮ್ಮ ರಾಮಚಂದ್ರ ಮತ್ತವರ ತಂಡದಿಂದ ಸುಗಮ ಸಂಗೀತ.
ಫೆ.19ರಂದು ಸೋಮವಾರ ಬೆಳಗ್ಗೆ 11ಕ್ಕೆ ಉತ್ತಮ ರಾಸುಗಳಿಗೆ ಜಾತ್ರಾ ಮಹೋತ್ಸವ ಸಮಿತಿಯಿಂದ ನಗದು ಬಹುಮಾನ ವಿತರಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net