ಮೈಸೂರಿನಲ್ಲಿ ಯಶಸ್ವಿಯಾಗಿ ನೆರವೇರಿದ ರೈಲ್ ಜನ ಸಂವಾದ


ಮೈಸೂರು ನಗರದ ರೈಲ್ವೆ ನಿಲ್ದಾಣದಲ್ಲಿ ರೈಲ್ ಜನ ಸಂವಾದ ಕಾರ್ಯಕ್ರಮವನ್ನು  ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ನಡೆಸಿಕೊಟ್ಟರು.
ಮೈಸೂರು ನಗರದ ರೈಲ್ವೆ ನಿಲ್ದಾಣದಲ್ಲಿ ರೈಲ್ ಜನ ಸಂವಾದ ಕಾರ್ಯಕ್ರಮವನ್ನು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ನಡೆಸಿಕೊಟ್ಟರು.
Published on: 

ಮೈಸೂರು: ವಿಶೇಷ ಅಭಿಯಾನ 6.0ರ ಅಂಗವಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿವಿಧ ನಿಲ್ದಾಣಗಳಲ್ಲಿ ಗುರುವಾರ ರೈಲ್ ಜನ ಸಂವಾದ ಕಾರ್ಯಕ್ರಮಗಳು ನಡೆಯಿತು. ಅಧಿಕಾರಿಗಳು ಮತ್ತು ಪ್ರಯಾಣಿಕರ ನಡುವೆ ನೇರ ಸಂವಾದ ಏರ್ಪಡಿಸಿ, ಸೌಲಭ್ಯ ಹಾಗೂ ಸ್ವಚ್ಛತೆ ಕುರಿತು ಸಲಹೆ ಪಡೆಯಲಾಯಿತು.

ಮೈಸೂರು ನಿಲ್ದಾಣದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ಮತ್ತು ಇತರ ಹಿರಿಯ ಅಧಿಕಾರಿಗಳು ಸುಮಾರು ಒಂದು ಗಂಟೆ ಪ್ರಯಾಣಿಕರೊಂದಿಗೆ ಚರ್ಚಿಸಿದರು. ಹಿರಿಯ ನಾಗರಿಕರ ಟಿಕೆಟ್ ರಿಯಾಯಿತಿಯನ್ನು ಮರುಸ್ಥಾಪಿಸುವಂತೆ ಪ್ರಯಾಣಿಕರು ಮನವಿ ಮಾಡಿದರು. ನಿಲ್ದಾಣದ ಸ್ವಚ್ಛತೆ ಮತ್ತು ನಿರ್ವಹಣೆಗೆ ಮೆಚ್ಚುಗೆಯೂ ವ್ಯಕ್ತವಾಯಿತು.

ಅಶೋಕಪುರಂ ನಿಲ್ದಾಣದಲ್ಲಿ ಆರೋಗ್ಯ ನಿರೀಕ್ಷಕರು, ರೈಲ್ವೆ ರಕ್ಷಣಾ ಪಡೆ ಮತ್ತು ನಿಲ್ದಾಣ ಸಿಬ್ಬಂದಿ ಜಂಟಿಯಾಗಿ ಕಾರ್ಯಕ್ರಮ ನಡೆಸಿ, ಘನತ್ಯಾಜ್ಯ ನಿರ್ವಹಣೆ ಮತ್ತು ಕಸ ವಿಂಗಡಣೆ ಕುರಿತು ಪ್ರಯಾಣಿಕರು, ವ್ಯಾಪಾರಿಗಳು ಹಾಗೂ ಸಿಬ್ಬಂದಿಗೆ ಜಾಗೃತಿ ಮೂಡಿಸಿದರು. ಶಿವಮೊಗ್ಗ ನಗರ, ಅರಸೀಕೆರೆ, ಮಂಗಳೂರು, ಹರಿಹರ, ಹಾವೇರಿ, ಹಾಸನ, ತಾಳಗುಪ್ಪ ಮತ್ತು ತರೀಕೆರೆ ನಿಲ್ದಾಣಗಳಲ್ಲೂ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net