ಸಿರವಾರ: ಎಸ್ಸಿ ಒಳಮೀಸಲಾತಿಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾದಿಗ ಒಳಮೀಸಲಾತಿ ಐಕ್ಯ ಹೋರಾಟ ತಾಲೂಕು ಘಟಕದಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.
ಸಮಿತಿ ಜಿಲ್ಲಾಧ್ಯಕ್ಷ ಅಬ್ರಾಹಂ ಹೊನ್ನಟಗಿ ಮಾತನಾಡಿ, ಪರಿಶಿಷ್ಟ ಜಾತಿಗಳಿಗೆ ಸಂಪೂರ್ಣ ಒಳ ಮೀಸಲಾತಿ ಜಾರಿಗೊಳಿಸದೆ ಮತ್ತು ಒಳ ಮೀಸಲಾತಿ ಅನ್ವಯಿಸದೆ 56432 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿರುವ ಕ್ರಮ ಖಂಡನೀಯ. ರಾಜ್ಯದ ಪರಿಶಿಷ್ಟ ಜಾತಿಗಳಿಲ್ಲಿನ ಶೇ.15 ಮೀಸಲಾತಿಯಲ್ಲಿ ಆಯಾ ಜನಸಂಖ್ಯಾವಾರು ಒಳ ಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯ 30-35 ವರ್ಷ ಹೋರಾಟ ಮಾಡಿದೆ. ಸರ್ಕಾರ ನಡೆಸಿದ ಎಲ್ಲ ಪಕ್ಷಗಳು ಹಾಗೂ ಸರ್ವರ ಗಮನಕ್ಕೂ ಇದೆ.
ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರವು ನಮ್ಮ ಸಮುದಾಯಗಳಿಗೆ ಉದ್ದೇಶ ಪೂರ್ವಕವಾಗಿ ಮೋಸ ಮಾಡಲೆಂದೇ ಆದೇಶಗಳನ್ನು ಹೊರಡಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಬಲಾಢ್ಯ ಬಲಗೈ ಹಾಗೂ ಸ್ಪಶ್ಯ ಸಮುದಾಯದ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಮಾದಿಗ ಸಮುದಾಯವನ್ನು ವಂಚಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಬಸವವೃತ್ತದಿಂದ ಬಸ್ ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಸಿಎಂಗೆ ಮನವಿ ಪತ್ರವನ್ನು ತಹಸೀಲ್ದಾರ್ ಅಶೋಕ ಪವಾರ್‌ಗೆ ಸಲ್ಲಿಸಲಾಯಿತು.