

ರಾಯಚೂರು: ಹಿಂದುಳಿದ ರಾಯಚೂರು, ಯಾದಗಿರಿ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಿಲ್ಲೆಗಳನ್ನಾಗಿ ಗುರುತಿಸಿದ್ದು, ಈ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರೇತರ ಸಂಸ್ಥೆಗಳು ಸರ್ಕಾರದ ಜತೆಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ಹೇಳಿದರು.
ಸ್ಥಳೀಯ ಜಿಪಂ ಸಭಾಂಗಣದಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳ ಸರ್ಕಾರೇತರ ಸಂಸ್ಥೆಗಳ ಅಧಿಕಾರಿಗಳಿಗಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿರು. ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಿದಾಗ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಹೆಚ್ಚಿನ ಒತ್ತಡವಿರುತ್ತದೆ. ಜನರೊಂದಿಗೆ ಯಾವ ರೀತಿ ನಡೆದುಕೊಂಡು ಮಾಹಿತಿ ಪಡೆದುಕೊಳ್ಳಬೇಕು ಎನ್ನುವುದನ್ನು ಅರಿತಿರಬೇಕು. ಪ್ರಮುಖವಾಗಿ ಆರೋಗ್ಯ, ಅಭಿವೃದ್ಧಿ ಸೇರಿ ವಿವಿಧ ವಿಷಯಗಳ ಬಗ್ಗೆ ನೀತಿ ಆಯೋಗಕ್ಕೆ ಮಾಹಿತಿ ನೀಡಬೇಕಾಗಿದೆ ಎಂದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಮಹತ್ವಾಕಾಂಕ್ಷಿ ಜಿಲ್ಲೆಗಳಾದ ರಾಯಚೂರು, ಯಾದಗಿರಿಯಲ್ಲಿ ಸಾಕಷ್ಟು ಎನ್‌ಜಿಒಗಳು ಕಾರ್ಯನಿರ್ವಹಿಸುತ್ತಿವೆ. ಶಾಲೆಗಳ ಅಭಿವೃದ್ಧಿ ಕೆಲಸವನ್ನು ಮಾಡಲಾಗುತ್ತಿದ್ದು, ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸುರೇಂದ್ರಬಾಬು, ಕಾರ್ಯಕ್ರಮ ನೋಡಲ್ ಅಧಿಕಾರಿ ಸುರಕ್ಷಿತ, ಎನ್‌ಜಿಒ ಮುಖ್ಯಸ್ಥರಾದ ಉಪೇಂದ್ರ, ರವೀಂದ್ರ, ಬಾಬುರಾವ್ ಇದ್ದರು.