

ರಾಯಚೂರು: ಕನಿಷ್ಟ ವೇತನ, ಸೇವಾ ಭದ್ರತೆ ಸೇರಿ ಇತರೆ ಕಾರ್ಮಿಕ ಸೌಲಭ್ಯಗಳಿಂದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಕಾರ್ಮಿಕರು ವಂಚಿತರಾಗಿದ್ದು, ಎರಡೂ ಕೇಂದ್ರಗಳಲ್ಲಿ ಜೀತದಂತೆ ಕಾರ್ಮಿಕನ್ನು ದುಡಿಸಿಕೊಳ್ಳಲಾಗುತ್ತಿದೆ ಎಂದು ಹಿಂದ್ ಮಜ್ದೂರ್ ಕಿಸಾನ್ ಪಂಚಾಯತಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಎಲ್ ಕಾಳಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಸೋಮವಾರ ಮಾತನಾಡಿ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಸಾರ್ವಜನಿಕ ಗುತ್ತಿಗೆ ಕಾರ್ಮಿಕರ ಪದ್ದತಿಯು ಅಸಮಾನತೆ, ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವ ಪದ್ದತಿಗಳಾಗಿದ್ದು, ಬಹುತೇಕ ಕಡೆಗಳಲ್ಲಿ ಗುತ್ತಿಗೆ ಪದ್ದತಿ ನಿಷೇಧಿಸಲಾಗಿದೆ ಆದರೆ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್‌ನಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸದೇ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ವಿದ್ಯುತ್ ಪ್ರಸರಣ ನಿಗಮವೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂಧಿಸದೇ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಗುತ್ತಿಗೆ ಪಡೆದ ಪವರ್ ಮ್ಯಾಕ್ ಕಂಪನಿಯತ್ತ ಬೆರಳು ಮಾಡಿ ತೋರಿಸುತ್ತಿದ್ದು, ಕೂಡಲೇ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಹಾಗೂ ಇತರೆ ಸೌಲಭ್ಯಗಳನ್ನು ನೀಡಲು ನಿಗಮ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಜೆ.ಎಲ್.ರೆಡ್ಡಿ, ಮಲ್ಲಪ್ಪ, ನಾರಾಯಣಸ್ವಾಮಿ, ಶಿವಾನಂದ ಸೇರಿದಂತೆ ಇತರರಿದ್ದರು.