

ರಾಯಚೂರು: ಜನರ ಸೇವೆ ಸಲ್ಲಿಸುವ ಅವಕಾಶ ದೊರೆತ್ತಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸದಾ ಶ್ರಮಿಸುವುದಾಗಿ ಸಂಸದ ಜಿ.ಕುಮಾರ ನಾಯಕ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಗುರುವಾರ ಮಾತನಾಡಿದರು.
ಈ ಹಿಂದೆ ಜಿಲ್ಲಾಧಿಕಾರಿಯಾಗಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ಅನುಭವ ನನ್ನಲ್ಲಿದ್ದು, ಇದೀಗ ಸಂಸದನಾಗಿ ಸೇವೆ ಮಾಡುವ ಸೌಭಾಗ್ಯ ದೊರೆತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನರ ಸೇವೆಗೆ ಸದಾ ಸಿದ್ಧನಿದ್ದೇನೆ ತಿಳಿಸಿದರು.
ರಾಯಚೂರು ಜಿಲ್ಲೆಯ ಸಂಪೂರ್ಣ ಅಭಿವೃದ್ಧಿ ನನ್ನ ಧ್ಯೇಯವಾಗಿದೆ. ಜನರ ವಿಶ್ವಾಸವನ್ನು ಹುಸಿಯಾಗಿಸದೇ ಕೆಲಸ ಮಾಡುವೆ. ಇರುವ ಐದು ವರ್ಷಗಳ ಕಾಲ ಅಭಿವೃದ್ಧಿಪರ ಯೋಜನೆಗಳನ್ನು ಕೇಂದ್ರದಿಂದ ಮಂಜೂರು ಮಾಡಿಸುವ ಹಾಗೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕೇಂದ್ರದ ಸರ್ಕಾರಗಳನ್ನು ಎಚ್ಚರಿಸುವ ಕಾರ್ಯಕ್ಕೆ ಮುಂದಾಗುವೆ ಎಂದು ತಿಳಿಸಿದರು.
ಇದೇ ವೇಳೆ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರು ಶ್ರಮವಹಿಸಿ ದುಡಿಯುತ್ತಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಎಂಎಲ್ಸಿ ಎ.ವಸಂತಕುಮಾರ, ಕೆಪಿಸಿಸಿ ಕಾರ್ಯದರ್ಶಿ ಕೆ.ಶಾಂತಪ್ಪ, ಮಾಧ್ಯಮ ವಕ್ತಾರ ರಝಾಕ್ ಉಸ್ತಾದ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷ ಬಸೀರ್ ಅಹ್ಮದ್, ಪ್ರಮುಖರಾದ ಬಸವರಾಜ, ಕೆ.ಪಂಪಾಪತಿ, ಕೆ.ರಾಮುಲು, ಶ್ರೀನಿವಾಸ, ಜಾಫರ್ ಅಲಿ, ರಫೀಕ್, ಹನುಮಂತಪ್ಪ, ಶಶಿಕಲಾ ಭೀಮರಾಯ ಸೇರಿದಂತೆ ಇತರರಿದ್ದರು.