

ರಾಯಚೂರು: ತಾಲೂಕಿನ ಶಕ್ತಿನಗರದ ಕೆಪಿಸಿಎಲ್‌ನ ದಯಾನಂದ ಆಂಗ್ಲೋ ವೇದಿಕಾ(ಡಿಎವಿ) ಶಾಲೆಯಲ್ಲಿ ಕನ್ನಡ ತರಗತಿಗಳನ್ನು ಬಂದ್ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಆರ್‌ಟಿಪಿಎಸ್ ಶಾಲೆಯನ್ನು 2009-10ನೇ ಸಾಲಿನಲ್ಲಿ ಡಿಎವಿ ಎಂಬ ಖಾಸಗಿ ಶಿಕ್ಷಣ ಸಂಸ್ಥೆಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಕನ್ನಡ ತರಗತಿಗಳನ್ನು ನಡೆಸಲಾಗುತ್ತಿತ್ತು. 2013-14ನೇ ಸಾಲಿನಿಂದ ಪ್ರತಿ ವರ್ಷ ಒಂದೊಂದೆ ಕನ್ನಡ ತರಗತಿಗಳನ್ನು ಮುಚ್ಚುತ್ತಾ ಬಂದಿದ್ದು, ಇದೀಗ ಸಂಪೂರ್ಣವಾಗಿ ಈ ಶಾಲೆಯಲ್ಲಿ ಕನ್ನಡ ತರಗತಿಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಕನ್ನಡ ಭಾಷೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಕೂಡಲೇ ಡಿಎವಿ ಸಂಸ್ಥೆಯ ಮಾನ್ಯತೆಯನ್ನು ರದ್ದುಪಡಿಸಿ, ಇಲ್ಲಿನ ಮಕ್ಕಳಿಗೆ ಕನ್ನಡದಲ್ಲಿ ಅಭ್ಯಾಸ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಲಾಯಿತು.
ಡಿಎವಿ ಶಾಲೆಯು ಗಡಿ ಭಾಗದಲ್ಲಿದ್ದು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಮಿಕರ ಮಕ್ಕಳಿಗೆ ಹಾಗೂ ಸುತ್ತಲಿನ ಗ್ರಾಮಗಳ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿಯುವ ಅವಕಾಶವಿತ್ತು. ಶಿಕ್ಷಣ ಸಂಸ್ಥೆಯ ಈ ನಡೆಯಿಂದ ಅನೇಕ ಮಕ್ಕಳು ಕನ್ನಡ ಭಾಷೆ ಕಲಿಕೆಯಿಂದ ವಂಚಿತರಾಗಿದ್ದಾರೆ. ಕೂಡಲೇ ಶಕ್ತಿನಗರದಲ್ಲಿರುವ ಕನ್ನಡಾಸಕ್ತಿಯುಳ್ಳ ಮಕ್ಕಳಿಗೆ ಕನ್ನಡ ತರಗತಿಗಳನ್ನು ನಡೆಸಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ರಫೀಕ್ ಅಹ್ಮದ್, ರಾಮಣ್ಣ ಮ್ಯಾದಾರ್, ರಾಮಲಿಂಗಪ್ಪ, ರಾಮಪ್ಪ ಮಾಲೀಪಾಟೀಲ್, ರುದ್ರಯ್ಯ, ಎಚ್.ಎಚ್ ಮ್ಯಾದಾರ್, ಬಷೀರ್ ಅಹ್ಮದ್ ಹೊಸಮನಿ, ವೆಂಕಯ್ಯ, ವೀರಭದ್ರಯ್ಯ, ಮಹೇಂದ್ರ ಸಿಂಗ್, ರಾಜಾ, ನಿಜಾಮುದ್ದಿನ್, ನಾಗರಾಜ್, ಕೆ.ವೀರೇಶಬಾಬು ಸೇರಿದಂತೆ ಇತರರಿದ್ದರು.