

ಮಂಡ್ಯ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ರಸ್ತೆಗಳು ನದಿಯಂತಾಗಿದ್ದರಿಂದ ರೋಸಿ ಹೋದ ಸಾರ್ವಜನಿಕರು ಸ್ಥಳೀಯ ಜನಪ್ರತಿನಿಧಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಝಾಡಿಸಿದ್ದಾರೆ.
ಮಂಡ್ಯ ನಗರಸಭೆ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೀವ್ರ ತೊಂದರೆಯಾಗಿತ್ತು. ಫುಟ್‌ಪಾತ್‌ನ ಮೇಲಿದ್ದ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಕಾರಂಜಿಯ ಹಾಗೆ ಕೊಳಚೆ ನೀರು ಉಕ್ಕುತ್ತಿತ್ತು. ಇದನ್ನೆಲ್ಲ ವಿಡಿಯೋ ಮಾಡಿದ ವ್ಯಕ್ತಿಯೊಬ್ಬರು ಸ್ಥಳೀಯ ಜನಪ್ರತಿನಿಧಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ವಾಭಿಮಾನದ ಹೆಸರಿನಲ್ಲಿ ಮತಗಳನ್ನು ಪಡೆದಿರುವ ಸಂಸತ್ಸದಸ್ಯೆ ಸುಮಲತಾ ಅವರೇ ನಾವೆಲ್ಲ ಇದಕ್ಕೇನಾ ನಿಮಗೆ ಮತ ಹಾಕಿದ್ದು? ಶಾಸಕರಂತೂ ತಾವು ಅಸಹಾಯಕರು ಎಂಬುದನ್ನು ಈಗಾಗಲೇ ಬಹಿರಂಗವಾಗಿಯೇ ಒಪ್ಪಿಕೊಂಡು ಬಿಟ್ಟಿದ್ದಾರೆ. ಅವರನ್ನು ನಾವು ಕೇಳುವಂತೆಯೇ ಇಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರಿಗಾದರೂ ಇಂತಹ ಸಮಸ್ಯೆಗಳನ್ನು ಬಗೆಹರಿಸುವುದರ ಬಗ್ಗೆ ಆಸಕ್ತಿ ಇದೆಯೇ ಎಂದು ಆ ವ್ಯಕ್ತಿ ವಿಡಿಯೊದಲ್ಲಿ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.