ನಡುರಸ್ತೆಯಲ್ಲಿ ತೀವ್ರಗೊಂಡ ಹೋರಾಟ

ಬೈರಮಂಗಲ ಗ್ರಾಮದಲ್ಲಿ ರೈತರ ಹೋರಾಟ ಬೆಂಬಲಿಸಿ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿರುವುದು.
ಬೈರಮಂಗಲ ಗ್ರಾಮದಲ್ಲಿ ರೈತರ ಹೋರಾಟ ಬೆಂಬಲಿಸಿ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿರುವುದು.
Published on

ಬಿಡದಿ: ಸಮಗ್ರ ಉಪನಗರ ಯೋಜನೆ ಕೈ ಬಿಡಲು ಒತ್ತಾಯಿಸಿ ಬೈರಮಂಗಲ ಮುಖ್ಯರಸ್ತೆ ಮಧ್ಯೆಯೇ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬುಧವಾರ 4ನೇ ದಿನ ಪೂರೈಸಿತು.

ಉಪವಾಸ ನಿರತ ಮೂವರು ರೈತರು ಮಂಗಳವಾರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದರೆ ಉಳಿದಂತೆ 10 ಮಂದಿ ರೈತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಪೈಕಿ ಐವರು ಪುರುಷರು ಹಾಗೂ ಐವರು ಮಹಿಳೆಯರು ಇದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ಸಮಿತಿ ರಚಿಸಿ ಗ್ರಾಮಗಳಿಗೆ ಕಳುಹಿಸಿ ಅಧ್ಯಯನ ನಡೆಸಿ ವರದಿ ತರಿಸಿಕೊಳ್ಳುವುದಾಗಿ ಬೆಂಗಳೂರಿನಲ್ಲಿ ನಮಗೆ ಮಾತುಕೊಟ್ಟಿದ್ದರು. ಆದರೆ, ಈವರೆಗೂ ಒಬ್ಬರೇ ಒಬ್ಬ ಸಮಿತಿ ಸದಸ್ಯರು ಬಂದಿಲ್ಲ ಎಂದು ಕಿಡಿಕಾರಿದರು.

ನೆರಳಿಗಾಗಿ ಟಾರ್ಪಲ್ ಕಟ್ಟಲು ತಡೆ: ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ಹೋರಾಟ ನಡೆಸುತ್ತಿರುವ ರೈತರು ನೆರಳಿಗಾಗಿ ಟಾರ್ಪಲ್ ಕಟ್ಟಿಕೊಳ್ಳಲು ಮುಂದಾದರು. ಈ ವೇಳೆ ಪೊಲೀಸರು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಟಾರ್ಪಲ್ ಕಟ್ಟಲು ಬಿಡುವುದಿಲ್ಲ ಎಂದು ತಡೆದರು. ಇದರಿಂದ ರೈತರು ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ರೈತರು ಸೀರೆಗಳನ್ನು ಬಳಸಿ ರಸ್ತೆ ಬದಿಯಲ್ಲಿ ನೆರಳಿನ ವ್ಯವಸ್ಥೆ ಮಾಡಿಕೊಂಡು ಉಪವಾಸ ಮುಂದುವರಿಸಿದರು.

ಹೋರಾಟ ಸಮಿತಿಯ ಅಧ್ಯಕ್ಷ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಶೀನಪ್ಪರೆಡ್ಡಿ, ಖಜಾಂಚಿ ಮಂಡಲಹಳ್ಳಿ ನಾಗರಾಜು, ಪದಾಧಿಕಾರಿಗಳಾದ ಪ್ರಕಾಶ್, ಅಶ್ವತ್ಥ್, ಮಂಜುನಾಥ್, ಭರತ್, ಚೇತನ್, ರೈತ ಮಹಿಳೆಯರಾದ ಸುಮಾ, ಸುಮಿತ್ರಮ್ಮ, ಭಾಗ್ಯಾ ನಾಗರಾಜು, ಜಯಮ್ಮ, ನೇತ್ರಾ ಇತರರಿದ್ದರು.

ಅಂಗಡಿ ಮುಂಗಟ್ಟು ಬಂದ್

ತಮ್ಮ ಭೂಮಿ ಉಳಿವಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೈರಮಂಗಲದ ವರ್ತಕರು ಬೆಂಬಲ ವ್ಯಕ್ತಪಡಿಸಿದ್ದು, ಬುಧವಾರ ಬೆಳಗ್ಗೆಯಿಂದಲೇ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ರೈತರ ಹೋರಾಟಕ್ಕೆ ಸಾಥ್ ನೀಡಿದರು. ಇನ್ನೂ ರಸ್ತೆ ಮಧ್ಯೆಯೇ ರೈತರು ಒಲೆ ಹಾಕಿ ಅಡುಗೆ ಮಾಡಿ ಅಲ್ಲೇ ಊಟ ಮಾಡಿದರು. ಇದರಿಂದ ರೈತರ ಹೋರಾಟಕ್ಕೆ ಸ್ಥಳೀಯರಿಂದಲೂ ಬೆಂಬಲ ವ್ಯಕ್ತವಾಗುತ್ತಿರುವುದು ಕಂಡುಬಂತು.

ಪೊಲೀಸರಿಂದ ಮನವೊಲಿಸಲು ಯತ್ನ

ರಸ್ತೆ ತಡೆದು ಉಪವಾಸ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ರೈತರ ಮನವೊಲಿಸಲು ಮುಂದಾಗಿದ್ದರು. ಸ್ಥಳಕ್ಕೆ ಡಿವೈಎಸ್ಪಿ ಗಿರಿ ಭೇಟಿ ನೀಡಿ ರಸ್ತೆ ಬಿಟ್ಟು ಪಕ್ಕದಲ್ಲಿ ಹೋರಾಟ ಮಾಡುವಂತೆ ರೈತರಿಗೆ ಮನವಿ ಮಾಡಿದರು. ಆದರೆ, ಅವರ ಮಾತಿಗೆ ಒಪ್ಪದ ರೈತರು ಯೋಜನೆ ಕೈಬಿಡುವವರೆಗೂ ಯಾವುದೇ ಕಾರಣಕ್ಕೂ ರಸ್ತೆ ಬಿಡುವುದಿಲ್ಲ. ಇಲ್ಲಿಯೇ ಹೋರಾಟ ಮುಂದುವರಿಸುತ್ತೇವೆ ಎಂದು ಪ್ರತಿಭಟನಾ ನಿರತರರು ಪಟ್ಟುಹಿಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net