ಖಾಸಗಿ ಆಸ್ಪತ್ರೆಗಳ ಸಹಕಾರ ಅಗತ್ಯ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ

08TMK_COVID19_Pvt_Hosptl 5
Published on

ತುಮಕೂರು: ಖಾಸಗಿ ಆಸ್ಪತ್ರೆಗಳು ಸದಾಕಾಲ ಲಾಭದ ಬಗ್ಗೆಯೇ ಚಿಂತಿಸದೆ ಕರೊನಾ ಸಂಕಷ್ಟದಲ್ಲಿ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.

ತುಮಕೂರಿನ ಖಾಸಗಿ ಆಸ್ಪತ್ರೆಗಳು ಒಗ್ಗೂಡಿ ನಗರದ ಅಶ್ವಿನಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ ಆಸ್ಪತ್ರೆಯನ್ನು ಶನಿವಾರ ಪರಿಶೀಲಿಸಿ, ವೈದ್ಯರ ಜತೆಗೆ ಸಭೆ ನಡೆಸಿದರು. ಕೋವಿಡ್ ಪರೀಕ್ಷೆ ಹೆಸರಲ್ಲಿ ಬೇರೆಡೆಗೆ ಕಳುಹಿಸದೆ ನಿಮ್ಮ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಬೇಕು, ಸರ್ಕಾರ ನಿಮ್ಮ ಸೇವೆಗೆ ಗೌರವ ನೀಡಲಿದ್ದು ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಕೋವಿಡ್-19 ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ, ಇಂತಹ ಸಂಕಷ್ಟದ ಸಮಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಕರ್ತವ್ಯ, ಆಸ್ಪತ್ರೆಗೆ ಬರುವವರನ್ನು ಚಿಕಿತ್ಸೆ ನೀಡದೆ ಕೋವಿಡ್ ಪರೀಕ್ಷೆಯ ವರದಿ ಕೇಳಿ ವಾಪಸ್ ಕಳುಹಿಸಿದರೆ ಹೇಗೆ? ತುರ್ತು ಸಂದರ್ಭದಲ್ಲಿ ಬರುವ ರೋಗಿಗಳಿಗೆ ಮೊದಲು ಚಿಕಿತ್ಸೆ ನೀಡಿ ಬಡವರ ಸೇವೆ ವಾಡಿದರೆ ನಿಮ್ಮ ವೃತ್ತಿಗೂ ಗೌರವ ಬರುತ್ತದೆ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆಗಳನ್ನು ಕೋವಿಡ್ 19 ಚಿಕಿತ್ಸೆಗಾಗಿ ಮೀಸಲಿಡಬೇಕು, ಅದರಂತೆ ಜಿಲ್ಲೆಯಲ್ಲಿ 80 ಖಾಸಗಿ ಆಸ್ಪತ್ರೆಗಳಿವೆ. ತುಮಕೂರು ನಗರದಲ್ಲಿಯೇ 39 ಖಾಸಗಿ ಆಸ್ಪತ್ರೆಗಳಿವೆ. ಅವುಗಳಲ್ಲಿ ಲಭ್ಯವಿರುವ ಹಾಸಿಗೆ ಹಾಗೂ ಐಸಿಯುಗಳ ಪೈಕಿ ಶೇ.50 ಸರ್ಕಾರಕ್ಕೆ ದೊರೆಯಲಿವೆ. ಜಿಲ್ಲೆಯಲ್ಲಿ ಸುವಾರು 2500ಕ್ಕೂ ಹೆಚ್ಚು ಹಾಸಿಗೆಗಳು ಖಾಸಗಿ ಆಸ್ಪತ್ರೆಗಳಿಂದ ಲಭ್ಯವಾಗಲಿದೆ ಎಂದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಚರಕ ಆಸ್ಪತ್ರೆಯ ಡಾ.ಬಸವರಾಜ್, ಡಾ. ಪ್ರಭಾಕರ್, ಡಾ.ಮಹೇಶ್ ಮತ್ತಿತರರು ಇದ್ದರು. ಲೆಕ್ಕ ಪರಿಶೋಧಕ ರಾಮಚಂದ್ರಪ್ಪ ಜಿಲ್ಲಾಸ್ಪತ್ರೆಗೆ ವೆಂಟಿಲೇಟರ್ ಖರೀದಿಸಲು 4.50 ಲಕ್ಷ ರೂ. ಚೆಕ್ ಅನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.

ಶೇ.50 ಬೆಡ್ ನೀಡಿ : ಖಾಸಗಿ ಆಸ್ಪತ್ರೆಗಳ ಮನವಿಯಂತೆ ಕೆಲ ಆಸ್ಪತ್ರೆಗಳು ಒಗ್ಗೂಡಿ ಸರ್ಕಾರದ ವಾರ್ಗಸೂಚಿಯನ್ವಯ ಕೋವಿಡ್ ಆಸ್ಪತ್ರೆ ತೆರೆಯಲು ಅನುಮತಿ ನೀಡಲಾಗಿದೆ, ತುಮಕೂರು ನಗರದಲ್ಲಿ ಎರಡು ಕಡೆ ಆಸ್ಪತ್ರೆಗಳು ತೆರೆದಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಹೇಳಿದರು. ಖಾಸಗಿ ಆಸ್ಪತ್ರೆಗಳು ಶೇ.50 ಬೆಡ್ ಸರ್ಕಾರಕ್ಕೆ ಬಿಟ್ಟುಕೊಡಬೇಕು. ಜಿಲ್ಲೆಯಲ್ಲಿ ಆರ್‌ಟಿಪಿಸಿಆರ್ ಲ್ಯಾಬ್‌ಗಳ ಸಂಖ್ಯೆ ಹೆಚ್ಚಳ ವಾಡುತ್ತಿರುವುದರಿಂದ ಪರೀಕ್ಷೆಗಳ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ ಎಂದರು. ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳ ಸಂಖ್ಯೆಯ ಅಂಕಿ-ಅಂಶಗಳ ಬಗ್ಗೆ ಹಾಗೂ ಲಭ್ಯವಾಗುವ ಬೆಡ್‌ಗಳ ಬಗ್ಗೆ ಡಿಎಚ್‌ಒ ಡಾ.ನಾಗೇಂದ್ರಪ್ಪ ಸಭೆಗೆ ವಾಹಿತಿ ನೀಡಿದರು.

ಸೋಂಕಿತರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಲ್ಲಿ ತಜ್ಞರು ಇಲ್ಲದಿದ್ದರೂ ಆಂತರಿಕವಾಗಿ ಆಸ್ಪತ್ರೆಗಳೇ ವ್ಯವಸ್ಥೆ ವಾಡಿಕೊಳ್ಳಬೇಕು. ಚಿಕಿತ್ಸೆಯಲ್ಲಿ ಲೋಪವಾಗಿ ದೂರುಗಳು ಬಂದರೆ ಸುಮ್ಮನಿರುವುದಿಲ್ಲ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net