ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ದಿನದಂದು ನಡೆಯುವ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯಾಗಿ ದುಬಾರೆ ಆನೆ ಶಿಬಿರದ ಪ್ರಶಾಂತ ಆಯ್ಕೆಗೊಂಡಿದೆ. 54 ವರ್ಷ ವಯಸ್ಸಿನ ಪ್ರಶಾಂತ ಕಳೆದ 18 ವರ್ಷಗಳಿಂದ ಮೈಸೂರು ದಸರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಶಾಂತ ಸ್ವಭಾವ, ಭಾರ ಹೊರುವ ಸಾಮರ್ಥ್ಯ ಹಾಗೂ ಸುದೀರ್ಘ ಅನುಭವದ ಆಧಾರದಲ್ಲಿ ಈ ಮಹತ್ವದ ಜವಾಬ್ದಾರಿ ಒಲಿದಿದೆ.
ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಆನೆ ಯಾವುದು ಎಂಬ ಕುತೂಹಲಕ್ಕೆ ಅರಣ್ಯ ಇಲಾಖೆ ತೆರೆ ಎಳೆದಿದೆ. ಕಳೆದ ಹಲವು ವರ್ಷಗಳಿಂದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದ್ದ ಅಭಿಮನ್ಯು ನಿವೃತ್ತಿಯ ಹಿನ್ನೆಲೆಯಲ್ಲಿ ಈ ಬಾರಿ ಯಾವ ಆನೆಗೆ ಅವಕಾಶ ಸಿಗಲಿದೆ ಎಂಬ ಚರ್ಚೆ ನಡೆದಿತ್ತು. ಇದೀಗ ಪ್ರಶಾಂತನ ಹೆಗಲಿಗೆ ಈ ಜವಾಬ್ದಾರಿ ಬಿದ್ದಿದೆ.
ಅದೇ ರೀತಿ ಜಂಬೂಸವಾರಿಯ ಸುಗಮ ನಿರ್ವಹಣೆಗಾಗಿ ಧನಂಜಯನನ್ನು ಮೀಸಲು ಅಂಬಾರಿ ಆನೆಯಾಗಿ, ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಹಾಗೂ ಗೋಪಿ ಆನೆಯನ್ನು ನೌಫತ್ ಆನೆಯಾಗಿ ನಿಯೋಜಿಸಲಾಗಿದೆ. ಅಂಬಾರಿ ಆನೆಯ ಅಕ್ಕಪದಲ್ಲಿ ನಿಂತು ಸಾಗುವ ಕುಮ್ಕಿ ಅನೆಗಳಾಗಿ ಕಾವೇರಿ ಹಾಗೂ ರೂಪಾ ಆನೆಯನ್ನು ಆಯ್ಕೆ ಮಾಡಲಾಗಿದೆ. ಸಾಲಾನೆಗಳಾಗಿ ಮಹೇಂದ್ರ, ಶ್ರೀರಾಮ, ಶ್ರೀಕಂಠ, ಸುಗ್ರೀವ, ಏಕಲವ್ಯ, ಚೈತ್ರ ಮತ್ತು ಲಕ್ಷ್ಮೀ ಆನೆ ಆಯ್ಕೆಯಾಗಿದೆ. ಜನರ ಒತ್ತಾಯದ ಮೇರೆಗೆ ಅಭಿಮನ್ಯು ಈ ಬಾರಿಯೂ ದಸರೆಯಲ್ಲಿ ಪಾಲ್ಗೊಂಡಿದ್ದು, ನಿಶಾನೆ ಆನೆಯಾಗಿ ತನ್ನ ಕೊನೆಯ ದಸರಾ ಮಹೋತ್ಸವದಲ್ಲಿ ಭಾಗವಹಿಸಲಿದೆ.
18 ವರ್ಷಗಳ ಸುದೀರ್ಘ ಅನುಭವ:
ಪ್ರಶಾಂತ ಆನೆಯು ಕಳೆದ 18 ವರ್ಷಗಳಿಂದ ಮೈಸೂರು ದಸರೆಯಲ್ಲಿ ಭಾಗವಹಿಸುತ್ತಿದ್ದು, ಅರಮನೆಯ ವಾತಾವರಣ, ಜಂಬೂಸ ವಾರಿ ಮಾರ್ಗ, ಜನಸಂದಣಿ, ವಾದ್ಯಘೋಷ ಹಾಗೂ ಮಾವುತರ ನಿರ್ದೇಶನಗಳಿಗೆ ಚೆನ್ನಾಗಿ ಹೊಂದಿಕೊಂಡಿದೆ. ಜಂಬೂಸವಾರಿಯಂತಹ ಬೃಹತ್ ಮೆರವಣಿಗೆಯಲ್ಲಿ ಆನೆ ಶಾಂತವಾಗಿ, ಸ್ಥಿರವಾಗಿ ಸಾಗುವುದು ಅತ್ಯಂತ ಮುಖ್ಯವಾಗಿದ್ದು, ಪ್ರಶಾಂತನ ಅನುಭವ ಅದರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಅಂಬಾರಿ ಹೊರುವುದಕ್ಕೆ ಅನುಕೂಲಕರವಾದ ಬೆನ್ನಿನ ರಚನೆ, ಸಮತೋಲನಯುತ ನಡಿಗೆ, ಸಹನಶಕ್ತಿ ಹಾಗೂ ಭಾರ ಹೊರುವ ಸಾಮರ್ಥ್ಯವನ್ನು ಆಯ್ಕೆ ಸಂದರ್ಭದಲ್ಲಿ ಪರಿಗಣಿಸಲಾಗಿದೆ. ಮರದ ಅಂಬಾರಿ ಮತ್ತು ಮರಳು ಮೂಟೆಗಳನ್ನು ಹೊತ್ತು ನಡೆಸಿದ ತರಬೇತಿಯಲ್ಲಿ ಪ್ರಶಾಂತ ಉತ್ತಮ ಕಾರ್ಯಕ್ಷಮತೆ ತೋರಿದ್ದಾನೆ. ನಿಗದಿತ ಮೆರವಣಿಗೆ ಮಾರ್ಗದಲ್ಲಿ ಸುಮಾರು 11 ಕಿ.ಮೀ. ದೂರದ ತಾಲೀಮಿನಲ್ಲಿಯೂ ಪಾಲ್ಗೊಂಡಿದ್ದು, 700 ಕೆ.ಜಿ. ಹಾಗೂ 1,000 ಕೆ.ಜಿ. ಭಾರದೊಂದಿಗೆ ನಡೆಸಿದ ಅಭ್ಯಾಸಗಳನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ್ದಾನೆ.
ಶಿವಮೊಗ್ಗದ ಕಾರೆಕೊಪ್ಪದಿಂದ ದುಬಾರೆಗೆ
ಪ್ರಶಾಂತ ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರಕ್ಕೆ ಸೇರಿದ ಆನೆ. 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಈ ಆನೆಯನ್ನು ಸೆರೆಹಿಡಿದಿತ್ತು. ಬಳಿಕ ದುಬಾರೆ ಆನೆ ಶಿಬಿರದಲ್ಲಿ ವಿಶೇಷ ತರಬೇತಿ ನೀಡಿ ಸಾಕಲಾಗಿದೆ. ದೀರ್ಘಕಾಲದ ತರಬೇತಿ ಮತ್ತು ದಸರೆಯಲ್ಲಿ ಪಾಲ್ಗೊಂಡ ಅನುಭವದಿಂದಾಗಿ ಪ್ರಶಾಂತ ಮೆರವಣಿಗೆಯ ವಾತಾವರಣಕ್ಕೆ ಹೊಂದಿಕೊಂಡಿದ್ದಾನೆ. ಪ್ರಶಾಂತ ಆನೆ 2.61 ಮೀಟರ್ ಎತ್ತರ, 3.46 ಮೀಟರ್ ಉದ್ದ, 5205 ಕೆ.ಜಿ ತೂಕ ಹೊಂದಿದ್ದಾನೆ. ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದಾನೆ. ಪ್ರಶಾಂತನನ್ನು ಮಾವುತ ಜೆ.ಎ. ಚಿನ್ನಪ್ಪ, ಕಾವಾಡಿ ಚಂದ್ರ ಪಾಲನೆ ಮಾಡುತ್ತಿದ್ದಾರೆ.
ಸಮಗ್ರ ಪರಿಶೀಲನೆ ಬಳಿಕ ಆಯ್ಕೆ
ದಸರಾ ಮಹೋತ್ಸವಕ್ಕೆ ಆಗಮಿಸಿರುವ ಆನೆಗಳಿಗೆ ಅರಮನೆ ಆವರಣ ಹಾಗೂ ನಿಗದಿತ ಮೆರವಣಿಗೆ ಮಾರ್ಗದಲ್ಲಿ ನಿಯಮಿತ ತಾಲೀಮು ನೀಡಲಾಗಿದೆ. ಪ್ರಶಾಂತ, ಸುಗ್ರೀವ, ಧನಂಜಯ, ಏಕಲವ್ಯ, ಮಹೇಂದ್ರ ಆನೆಗಳಿಗೆ ಭಾರ ಹೊರುವ ಸಾಮರ್ಥ್ಯ, ನಡಿಗೆ, ಸಮತೋಲನ, ಸಹನಶಕ್ತಿ ಹಾಗೂ ವರ್ತನೆಯನ್ನು ಪರಿಶೀಲಿಸಲಾಗಿದೆ. ಪಶುವೈದ್ಯಾಧಿಕಾರಿಗಳು, ಅರಣ್ಯಾಧಿಕಾರಿಗಳು ಮತ್ತು ಅನುಭವಿ ಮಾವುತರ ಸಹಕಾರದೊಂದಿಗೆ ಈ ಮೌಲ್ಯಮಾಪನ ನಡೆಸಲಾಗಿದೆ. ಜಂಬೂಸವಾರಿಯ ಸಂದರ್ಭದಲ್ಲಿ ಸಿಡಿಮದ್ದಿನ ಶಬ್ದ ಹಾಗೂ ಜನಸಂದಣಿಯಿಂದ ಆನೆಗಳಿಗೆ ಉಂಟಾಗಬಹುದಾದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ತಾಲೀಮುಗಳನ್ನೂ ನೀಡಲಾಗಿದೆ. ಈ ಎಲ್ಲ ಹಂತಗಳಲ್ಲಿ ಆನೆಗಳ ಸಾಮರ್ಥ್ಯವನ್ನು ಗಮನಿಸಿ ಪ್ರಶಾಂತ ಆನೆಯನ್ನು ಆಯ್ಕೆ ಮಾಡಲಾಗಿದೆ.
ಮಹೇಂದ್ರನ ವೈಫಲ್ಯ
ಅಂಬಾರಿ ಹೊರುವ ಆನೆಗಳ ಪಟ್ಟಿಯಲ್ಲಿ ಇದ್ದ ಮಹೇಂದ್ರ ಅನೆ ಭಾರ ಹೊರುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಆತನನ್ನು ಅಂಬಾರಿ ಹೊರುವ ಜವಾಬ್ದಾರಿಯಿಂದ ಹೊರಗೆ ಇಡಲಾಯಿತು. ಮಾತ್ರವಲ್ಲ, ಶ್ರೀರಂಗಪಟ್ಟಣ ಅಂಬಾರಿ ಆನೆಯ ಪಟ್ಟದಿಂದಲೂ ಹೊರಗಿಡ ಲಾಯಿತು. ಮಹೇಂದ್ರನಿಗೆ 2 ಬಾರಿ ಭಾರ ಹೊರಿಸಲಾಯಿತು. ಒಂದು ಬಾರಿ ಅರಮನೆ ಆವರಣದವರೆಗೆ ಮತ್ತೊಂದು ಬಾರಿ ಆಯುರ್ವೇದ ವೃತ್ತದವರೆಗೆ ಮಾತ್ರ ಭಾರ ಹೊರಲು ಮಹೇಂದ್ರನಿಗೆ ಸಾಧ್ಯವಾಯಿತು. ಮಹೇಂದ್ರನ ವೈಫಲ್ಯದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಅಂಬಾರಿ ಆನೆಯಾಗ ಈಗಾಗಲೇ ಧನಂಜಯ ಆನೆಯನ್ನು ಆಯ್ಕೆ ಮಾಡಲಾಗಿದೆ.