ಡಿ.25ರಂದು ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ :ಫಲಾನುಭವಿಗಳಿಗೆ 4 ಕೋಟಿ ರೂ. ನೆರವು - ಕೆ.ಪ್ರಕಾಶ್ ಶೆಟ್ಟಿ

ppppppppp
Published on




ಮಂಗಳೂರು : ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ ನೆರವು ಪ್ರದಾನ ಕಾರ್ಯಕ್ರಮ ಡಿ.25ರಂದು ಸಾಯಂಕಾಲ 3.30ಕ್ಕೆ ನಗರದ ಗೋಲ್ಡ್ಫಿಂಚ್ ಸಿಟಿಯಲ್ಲಿ ನಡೆಯಲಿದೆ. ಈ ವರ್ಷ 1,828 ಮಂದಿಗೆ ಒಟ್ಟು 4 ಕೋಟಿ ರೂ.ಅಧಿಕ ಮೊತ್ತದ ನೆರವು ನೀಡಲಾಗುತ್ತಿದೆ ಎಂದು ಎಂಆರ್‌ಜಿ ಸಮೂಹ ಸಂಸ್ಥೆಗಳ ಚೇರ್ಮನ್ ಕೆ.ಪ್ರಕಾಶ್ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಟ ರಮೇಶ್ ಅರವಿಂದ್ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ,
ಎಂಆರ್‌ಜಿ ಸಮೂಹ ಸಂಸ್ಥೆಗಳ ಚೇರ್ಮನ್ ಕೆ.ಪ್ರಕಾಶ್ ಶೆಟ್ಟಿ, ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ
ಭಾಗವಹಿಸಲಿದ್ದಾರೆ . ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿ ಒಂದು ಸ್ವತಂತ್ರ ಸಮಿತಿ ರಚಿಸಲಾಗಿದ್ದು, ಅದರ ಅನುಸಾರ ಪಟ್ಟಿ
ತಯಾರಿಸಿದ್ದೇವೆ. ಫಲಾನುಭವಿಗಳ ಪ್ರಯಾಣ ವೆಚ್ಚವನ್ನು ನಮ್ಮ ಸಂಸ್ಥೆಯೇ ಭರಿಸುತ್ತದೆ.ಸಮಾರಂಭದಲ್ಲಿ 25 ಕೌಂಟರ್‌ಗಳನ್ನು ತೆರೆಯಲಾಗುತ್ತದೆ ಎಂದು ಅವರು ತಿಳಿಸಿದರು.
*ಸಂಘ ಸಂಸ್ಥೆಗಳಿಗೆ ನೆರವು :
ಒಂದು ಕುಟುಂಬದಲ್ಲಿ ಸರಾಸರಿ ಐದು ಮಂದಿ ಎಂದು ಪರಿಗಣಿಸಿದರೂ ಈ ನೆರವಿನಿಂದ ಸುಮಾರು ಹತ್ತು ಸಾವಿರ ಜನರಿಗೆ ಪರೋಕ್ಷ ಪ್ರಯೋಜನವಾಗಲಿದೆ. ಅರ್ಹರು ವಂಚಿತರಾಗಬಾರದು ಎಂಬ ಕಾರಣಕ್ಕೆ ಸ್ಥಳೀಯ ಸಂಘ ಸಂಸ್ಥೆಗಳನ್ನು, ಸ್ವಯಂಸೇವಕರನ್ನು ಬಳಸಿಕೊಂಡು ಅವರ ಆರ್ಥಿಕ ಸ್ಥಿತಿಗತಿ ಮತ್ತು ಅವರು ಎದುರಿಸುತ್ತಿರುವ ಪರಿಸ್ಥಿತಿಯ ಪ್ರತ್ಯಕ್ಷ ಮಾಹಿತಿ ಪಡೆದು ಆಯ್ಕೆಯನ್ನು ಮಾಡಲಾಗಿದೆ. ಸಂಘ ಸಂಸ್ಥೆಗಳನ್ನು ಅವುಗಳ ಕಾರ್ಯ ವೈಖರಿ, ಹಮ್ಮಿಕೊಂಡ ಸಮಾಜಮುಖಿ ಚಟುವಟಿಕೆಗಳನ್ನು ಗಮನಿಸಿ ನೆರವು ನೀಡುವುದಕ್ಕೆ ಆಯ್ಕೆ ಮಾಡಲಾಗಿದೆ. ಮಾನಸಿಕ, ಅಂಗವೈಕಲ್ಯ, ದೀರ್ಘ ಕಾಲೀನ ಚಿಕಿತ್ಸೆ ಬೇಡುವ ಕ್ಯಾನ್ಸರ್‌ನಂತಹ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆಗೆ ನೆರವು ನೀಡಲು ಆದ್ಯತೆ ನೀಡಿದ್ದೇವೆ. ಪ್ರತಿಭಾವಂತ ಆದರೆ ಕಷ್ಟದ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಿದ್ದೇವೆ. ಉಳಿದಂತೆ ಕ್ರೀಡಾಳುಗಳು, ರಾಷ್ಟ್ರ ಮತ್ತು ರಾಜ್ಯಕ್ಕೆ ಕೀರ್ತಿ ತಂದ ಸಾಧಕರನ್ನು ಪ್ರೋತ್ಸಾಹಿಸಲು ಅವರನ್ನು ಗೌರವಿಸಲು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರ ನೀಡಿದರು.
*ಮಾನವೀಯ ನೆರವು
ಬೆಂಗಳೂರಿನಲ್ಲಿ ನಡೆದ ಕಂಬಳವನ್ನು ವೀಕ್ಷಿಸಿ ಊರಿಗೆ ಮರಳುತ್ತಿದ್ದವರು ಅಪಘಾತದಲ್ಲಿ ಸಾವಿಗೀಡಾದ ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಮತ್ತು ಗಾಯಗೊಂಡವರಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡಲಾಗುತ್ತಿದೆ. ಕಾಪು ಲೀಲಾಧರ ಶೆಟ್ಟಿ ಅವರು ಕಾಪುವಿನಲ್ಲಿ ಶಾಲೆಗೆ ಗೌರವ ಶಿಕ್ಷಕರ ನೇಮಕ ಮಾಡಿ ತಾವೇ ಖರ್ಚು ಭರಿಸುತ್ತಿದ್ದರು. ಅವರ ನಿಧನದ ಬಳಿಕ ಅಲ್ಲಿ ಶಿಕ್ಷಕರಿಗೆ ವೇತನದ ಸಮಸ್ಯೆಯಾಗಬಾರದು ಎನ್ನುವ ಉದ್ದೇಶದಿಂದ ಮುಂದಿನ ಕೆಲ ವರ್ಷ ಆ ಶಾಲೆಗೆ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತದ ಮೂಲಕ ನೆರವು ನೀಡಲಿದೆ.
ಬಂಟ್ವಾಳದ ಶಾಲೆಯೊಂದಕ್ಕೆ ಕಂಪ್ಯೂಟರ್ ನೀಡುವ ಮೂಲಕ ಅಲ್ಲಿಯ ಮಕ್ಕಳನ್ನು ಕಂಪ್ಯೂಟರ್ ಸಾಕ್ಷರರನ್ನಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಾಪು ಕೈಪುಂಜಾಲಿನಲ್ಲಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಅಧ್ಯಕ್ಷರಾಗಿರುವ ವಿದ್ಯಾ ಸಾಗರ ಎಜ್ಯುಕೇಶನ್ ಟ್ರಸ್ಟ್ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ನೆರವು ವಿತರಿಸಲಾಗುವುದು.
*ಕ್ರೀಡಾ ಪ್ರೋತ್ಸಾಹ
ಅಮೆರಿಕಾದಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದ ನಮ್ಮ ಜಿಲ್ಲೆಯ ಕ್ರೀಡಾಳು ಆಯುಷ್ ಶೆಟ್ಟಿ , ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಭಾರತದ 10ನೇ ಶಟ್ಲರ್ ಅರ್ಜುನ್ ಶೆಟ್ಟಿ ಅವರಿಗೆ ನೆರವು ನೀಡಲಾಗುತ್ತಿದೆ. ಪಿ.ಯು.ಸಿ.ಯಲ್ಲಿ 600ಕ್ಕೆ 600 ಅಂಕ ಗಳಿಸಿದ ಅನನ್ಯ ಮತ್ತು ಎಸ್‌ಎಸ್‌ಎಲ್‌ಸಿ ಯಲ್ಲಿ 625ಕ್ಕೆ 625 ಅಂಕ ಗಳಿಸಿದ ವೀಕ್ಷಿತಾ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಿ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಕೆ.ಪ್ರಕಾಶ್ ಶೆಟ್ಟಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net