

ಮೈಸೂರು: ಮನೆ ಅಥವಾ ನಿವೇಶನವೊಂದನ್ನು ಹೊಂದುವುದು ಜನರ ಪಾಲಿಗೆ ಜೀವಮಾನದ ಕನಸು. ಆದರೆ, ಅದೇ ಆಸ್ತಿಯ ಇ-ಖಾತೆ ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಪದೇಪದೆ ಅಲೆಯಬೇಕಾದ ಪರಿಸ್ಥಿತಿ ಎದುರಾದರೆ, ಆಸ್ತಿ ಮಾಲೀಕರ ಸಂಕಷ್ಟ ಹೇಳತೀರದು. ಅರ್ಜಿ ಸಲ್ಲಿಕೆ, ದಾಖಲೆಗಳ ಪರಿಶೀಲನೆ, ಸಣ್ಣಪುಟ್ಟ ತಿದ್ದುಪಡಿಗಳು, ಅಧಿಕಾರಿಗಳ ಭೇಟಿಗಾಗಿ ಕಾಯುವಿಕೆ ಹೀಗೆ ಹತ್ತಾರು ಹಂತಗಳನ್ನು ದಾಟುವಷ್ಟರಲ್ಲಿ ಜನರು ಹೈರಾಣಾಗುತ್ತಿದ್ದಾರೆ. ಈ ಅಲೆದಾಟಕ್ಕೆ ಪರಿಹಾರ ಒದಗಿಸಲು ನಗರ ಪಾಲಿಕೆ ಇದೀಗ ವಿಶೇಷ ಪ್ರಜಾಸೇವಾ ಆಂದೋಲನ ಆಯೋಜಿಸಿದೆ.
ಅ.28ರಂದು ನಡೆಯಲಿರುವ ಈ ಆಂದೋಲನ, ಇ-ಖಾತೆಗಾಗಿ ದಿನಗಟ್ಟಲೆ ಕಚೇರಿಗಳಿಗೆ ಅಲೆದಾಡುತ್ತಿರುವ ಆಸ್ತಿ ಮಾಲೀಕರಿಗೆ ನೆಮ್ಮದಿ ನೀಡುವ ನಿರೀಕ್ಷೆ ಮೂಡಿಸಿದೆ. ಕೇವಲ 175 ರೂ.ಶುಲ್ಕದಲ್ಲಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಒದಗಿಸಿದ ಅರ್ಹ ಅರ್ಜಿಗಳನ್ನು 72 ಗಂಟೆಗಳಲ್ಲಿ ವಿಲೇವಾರಿ ಮಾಡುವ ಉದ್ದೇಶ ಈ ವಿಶೇಷ ಅಭಿಯಾನದ ಹಿಂದಿದೆ. ಎಲ್ಲವೂ ಯೋಜನೆಯಂತೆ ನಡೆದರೆ, ಇ-ಖಾತೆಗಾಗಿ ಸಾರ್ವಜನಿಕರು ಅನುಭವಿಸುತ್ತಿರುವ ಅನಗತ್ಯ ವಿಳಂಬ ಮತ್ತು ಅಲೆದಾಟವನ್ನು ಕಡಿಮೆ ಮಾಡಲು ಇದು ಮಹತ್ವದ ಹೆಜ್ಜೆಯಾಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ನಿರ್ದೇಶನದಂತೆ, ನಗರ ಪಾಲಿಕೆ ಅಧಿಕಾರಿಗಳು ಈ ಆಂದೋ ಲನ ಆಯೋಜಿಸಿದ್ದಾರೆ. ಅ.28 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ನಗರ ಪಾಲಿಕೆಯ ಮುಖ್ಯ ಕಚೇರಿಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಬಹುದು. ಪಾಲಿಕೆಯ ಎಲ್ಲ ಒಂಬತ್ತು ವಲಯಗಳ ವ್ಯಾಪ್ತಿಗೆ ಒಳಪಡುವ ಮನೆಗಳು ಮತ್ತು ನಿವೇಶನಗಳ ಮಾಲೀಕರಿಗೆ ಈ ಅವಕಾಶ ಕಲ್ಪಿಸಲಾಗಿದೆ.
ಸಾಮಾನ್ಯವಾಗಿ ಇ-ಖಾತೆಗಾಗಿ ಕಚೇರಿಗಳಿಗೆ ತೆರಳಿ ಮಾಹಿತಿ ಪಡೆಯುವುದು, ದಾಖಲೆಗಳನ್ನು ಸಿದ್ಧಪಡಿಸುವುದು, ಅರ್ಜಿ ಸಲ್ಲಿಸುವುದು ಹಾಗೂ ಅದರ ಸ್ಥಿತಿಗತಿ ತಿಳಿಯಲು ಮತ್ತೆ ಮತ್ತೆ ಭೇಟಿ ನೀಡುವುದು ಸಾರ್ವಜನಿಕರಿಗೆ ಸಮಯ ಮತ್ತು ಹಣದ ಹೊರೆಯಾಗುತ್ತದೆ. ಕೆಲಸದ ದಿನಗಳನ್ನು ಕಳೆದುಕೊಂಡು ಕಚೇರಿಗಳಿಗೆ ಅಲೆಯಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ, ಒಂದೇ ಸ್ಥಳದಲ್ಲಿ ಅರ್ಜಿ ಸಲ್ಲಿಕೆ ಹಾಗೂ ದಾಖಲೆಗಳ ಆನ್‌ಲೈನ್ ಅಪ್‌ಲೋಡ್‌ಗೆ ಪಾಲಿಕೆ ಸಿಬ್ಬಂದಿಯ ನೆರವು ಒದಗಿಸುವುದು ಆಂದೋಲನದ ಪ್ರಮುಖ ಉದ್ದೇಶವಾಗಿದೆ.
ಅರ್ಜಿ ಸಲ್ಲಿಸಿದ ದಿನವೇ ಸ್ವೀಕೃತಿ ಪತ್ರ ನೀಡಲಾಗುತ್ತದೆ. ದಾಖಲೆಗಳು ಸರಿಯಾಗಿದ್ದು, ಅರ್ಜಿ ಅರ್ಹವಾಗಿದ್ದರೆ ಮೂರು ದಿನಗಳೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಅ.31 ರಂದು ಸಂಜೆ 4 ಗಂಟೆಗೆ ಇ-ಖಾತೆ ವಿತರಿಸಲು ಉದ್ದೇಶಿಸಲಾಗಿದೆ.
175 ರೂ. ಶುಲ್ಕ:
ನೋಂದಣಿ ಶುಲ್ಕ 10 ರೂ., ಸೇವಾ ಶುಲ 165 ರೂ.ಸೇರಿದಂತೆ ಒಟ್ಟು 175 ರೂ. ಪಾವತಿಸಿ ಅರ್ಜಿ ಸಲ್ಲಿಸಬಹುದು. ಈ ಆಂದೋಲನದ ಯಶಸ್ಸು ಕೇವಲ ಘೋಷಣೆಗೆ ಸೀಮಿತವಾಗಬಾರದು. ಅರ್ಹ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವುದು, ದಾಖಲೆಗಳಲ್ಲಿ ಲೋಪವಿದ್ದರೆ ಅದನ್ನು ಸ್ಪಷ್ಟವಾಗಿ ತಿಳಿಸುವುದು ಹಾಗೂ ಸಾರ್ವಜನಿಕರಿಗೆ ಅನಗತ್ಯವಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ಅರ್ಜಿ ಸಲ್ಲಿಸುವಾಗ ಆಸ್ತಿ ಮಾಲೀಕರು ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಫೋನ್‌ನ್ನು ಕಡ್ಡಾಯವಾಗಿ ತರಬೇಕು. ಅರ್ಜಿ ಪ್ರಕ್ರಿಯೆಯಲ್ಲಿ ಒಟಿಪಿ ಸ್ವೀಕರಿಸಿ ದೃಢೀಕರಿಸುವ ಅಗತ್ಯವಿರುವುದರಿಂದ, ಮೊಬೈಲ್ ಲಭ್ಯವಿಲ್ಲದಿದ್ದರೆ ಪ್ರಕ್ರಿಯೆ ಮುಂದುವರಿಸಲು ತೊಂದರೆಯಾಗಬಹುದು.
ಅರ್ಜಿ ಸಲ್ಲಿಸುವವರು ಎಲ್ಲ ದಾಖಲೆಗಳ ಮೂಲ ಪ್ರತಿಗಳನ್ನು ಮತ್ತು ಅಗತ್ಯವಿರುವ ಪ್ರತಿಗಳನ್ನು ಸಿದ್ಧಪಡಿಸಿಕೊಂಡು ಹೋಗುವುದು ಒಳಿತು. ಅರ್ಜಿ ಸಲ್ಲಿಸುವ ಮುನ್ನ ದಾಖಲೆಗಳ ವಿವರಗಳನ್ನು ಪರಿಶೀಲಿಸಿಕೊಂಡರೆ, ಸ್ಥಳದಲ್ಲೇ ದಾಖಲೆಗಳ ಕೊರತೆಯಿಂದ ಉಂಟಾಗುವ ವಿಳಂಬವನ್ನು ತಪ್ಪಿಸಬಹುದು. ಮಾಹಿತಿಗೆ ಪಾಲಿಕೆಯ ಅಧಿಕೃತ ವೆಬ್‌ಸೈಟ್ ವೀಕ್ಷಿಸಬಹುದು.
ಎ-ಖಾತೆ ಆಸ್ತಿಗಳ ಮಾಲೀಕರು ನೀಡಬೇಕಾದ ದಾಖಲೆಗಳು
1. ನೋಂದಾಯಿತ ಕ್ರಯಪತ್ರ, ದಾನಪತ್ರ ಅಥವಾ ಇತರೆ ನೋಂದಾಯಿತ ಮಾಲೀಕತ್ವದ ದಾಖಲೆ.
2. ಆಸ್ತಿ ಈಗಾಗಲೇ ಪಾಲಿಕೆಯಲ್ಲಿ ಖಾತಾ ನೋಂದಣಿಯಾಗಿದ್ದರೆ, ನೋಂದಣಿ ದಿನಾಂಕದಿಂದ 31-03-2026ರವರೆಗಿನ ಅವಧಿಗೆ ಸಂಬಂಧಿಸಿದ ಋಣಭಾರ ಪ್ರಮಾಣಪತ್ರ (ಇಸಿ), ಖಾತೆ ನೋಂದಣಿಯಾಗಿಲ್ಲದಿದ್ದರೆ, ಸಂಬಂಧಿತ ನೋಂದಾಯಿತ ದಾಖಲೆಗಳ ದಿನಾಂಕದಿಂದ ಅನ್ವಯವಾಗುವ ಅವಧಿಯ ಇಸಿ
4. ಪ್ರಸಕ್ತ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಪಾವತಿ ರಸೀದಿ.
5. ಆಸ್ತಿ ಮಾಲೀಕರ ಭಾವಚಿತ್ರ ಮತ್ತು ಆಸ್ತಿಯ ಭಾವಚಿತ್ರ.
6. ಆಸ್ತಿ ಮಾಲೀಕರ ಆಧಾರ್ ಕಾರ್ಡ್
ಬಿ-ಖಾತೆ ಆಸ್ತಿಗಳ ಮಾಲೀಕರು ನೀಡಬೇಕಾದ ದಾಖಲೆಗಳು
1. 10-09-2024ಕ್ಕಿಂತ ಪೂರ್ವದ ನೋಂದಾಯಿತ ಮಾಲೀಕತ್ವದ ದಾಖಲೆಗಳು.
2. ಆಸ್ತಿ ಪಾಲಿಕೆಯಲ್ಲಿ ಖಾತಾ ನೋಂದಣಿಯಾಗಿದ್ದರೆ ನೋಂದಣಿ ದಿನಾಂಕದಿಂದ 31-03-2026ರವರೆಗಿನ ಅವಧಿಯ ಇಸಿ. ಖಾತಾ ನೋಂದಣಿಯಾಗದಿದ್ದರೆ, ಸಂಬಂಧಿತ ದಾಖಲೆಗಳ ನೋಂದಣಿ ದಿನಾಂಕದಿಂದ ಅನ್ವಯವಾಗುವ ಅವಧಿಯ ಇಸಿ.
4. ಪ್ರಸಕ್ತ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಪಾವತಿ ರಸೀದಿ.
5. ಆಸ್ತಿಗೆ ಸಂಬಂಧಿಸಿದ ಆರ್‌ಟಿಸಿ
6. ಆಸ್ತಿ ಮಾಲೀಕರ ಭಾವಚಿತ್ರ ಮತ್ತು ಆಸ್ತಿಯ ಭಾವಚಿತ್ರ.
7. ಆಸ್ತಿ ಮಾಲೀಕರ ಆಧಾರ್ ಕಾರ್ಡ್