ವಕಾಲತು ತಂತ್ರ ಕಲಿಕೆಗೆ ಬೇಕು ಮಾರ್ಗದರ್ಶನ...

Court 1
Published on

ನ್ಯಾಯಾಧೀಶ ಇ.ಎಸ್​. ಇಂದಿರೇಶ ಅಭಿಮತ

ದಿ. ಶ್ರೀಪತಿ ಆಚಾರ್ಯರ ಭಾವಚಿತ್ರ ಅನಾವರಣ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಅಭಿಮನ್ಯವಿಗೆ ಚಕ್ರವ್ಯೂಹದ ಒಳಗೆ ಹೋಗುವುದು ಗೊತ್ತಿತ್ತು. ಆದರೆ, ಹೊರಬರುವ ತಂತ್ರ ತಿಳಿದಿರಲಿಲ್ಲ. ಅಂತೆಯೇ ವಕೀಲರಿಗೆ ಹಿರಿಯ ವಕೀಲರ ಮಾರ್ಗದರ್ಶನ ಇಲ್ಲದಿದ್ದಲ್ಲಿ ಕಾನೂನು ಸಂಘರ್ಷ ಜಯಿಸುವುದು ಕಷ್ಟ. ಹಿರಿಯರ ಗರಡಿಯಲ್ಲಿ ಪಳಗಿ, ವಕಾಲತು ತಂತ್ರ ಕಲಿಯಬೇಕು ಎಂದು ಕಿರಿಯ ವಕೀಲರಿಗೆ ಹೈಕೋರ್ಟ್​ ನ್ಯಾಯಾಧೀಶ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಇ.ಎಸ್​. ಇಂದಿರೇಶ ಸಲಹೆ ನೀಡಿದರು.

ಉಡುಪಿಯ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಉಡುಪಿ ವಕೀಲರ ಸಂಘದ ವತಿಯಿಂದ ಜುಲೈ 5ರಂದು ಬೆಳಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ದಿ. ಅಲೆವೂರು ಶ್ರೀಪತಿ ಆಚಾರ್ಯ ಅವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

ಕಠಿಣ ಪರಿಶ್ರಮ ಅಗತ್ಯ

Court 2
ಹಿರಿಯ ವಕೀಲರ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದರೆ ಯುವ ವಕೀಲರು ವೃತ್ತಿಯಲ್ಲಿ ಅರ್ಧದಷ್ಟು ಯಶಸ್ವಿಯಾಗುತ್ತಾರೆ. ಉಳಿದ ಅರ್ಧವನ್ನು ಕಠಿಣ ಪರಿಶ್ರಮದಿಂದ ಸಾಧನೆ ಮಾಡಬೇಕು. ನಾನೂ ಸಹ ವಕೀಲನಾಗಿದ್ದಾಗ ಕೋರ್ಟ್​ ಹಾಲ್​ನಲ್ಲಿ ಹಿರಿಯರಿಂದ ಬಹಳ ಕಲಿತಿದ್ದೇನೆ. ಸೀನಿಯರ್​ ಎಂದರೆ ಎಲ್ಲರಿಗೂ ಸೀನಿಯರ್​ ಎಂದರು ನ್ಯಾಯಾಧೀಶ ಇ.ಎಸ್​. ಇಂದಿರೇಶ.

ವೃತ್ತಿಗೆ ದಾರಿದೀಪ

ಹೈಕೋರ್ಟ್​ ನ್ಯಾಯಾಧೀಶೆ ಎಂ.ಜಿ. ಉಮಾ ಮಾತನಾಡಿ, ದಿ.ಆಚಾರ್ಯರು ನನ್ನ ಗುರುಗಳು. ಅವರ ಆಶೀರ್ವಾದದ ಬಲದಿಂದ ನ್ಯಾಯಾಧೀಶೆಯಾದ ಸಾರ್ಥಕ್ಯ ಭಾವವಿದೆ. ಅವರ ಪಾಟಿಸವಾಲಿನ ಚಾಕಚಕ್ಯತೆ ನನ್ನನ್ನು ಬಹಲವಾಗಿ ಕಾಡುತ್ತಿತ್ತು. ನಂತರ ನಾನೂ ಅವರ ಶಿಷ್ಯೆಯಾದೆ. ನನ್ನ ವೃತ್ತಿ, ಮಸ್ತಿಷ್ಕಕ್ಕೆ ಅವರು ದಾರಿದೀಪವಾದರು ಎಂದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ ಎಸ್​. ಗಂಗಣ್ಣನವರ್​, ದಿ.ಶ್ರೀಪತಿ ಆಚಾರ್ಯ ಅವರ ಪುತ್ರಿ ಚಂದನಾ ರಾವ್​ ಉಪಸ್ಥಿತರಿದ್ದರು.

ಇಂಚರಾ ಪ್ರಾರ್ಥಿಸಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವೀಣಕುಮಾರ್​ ಸ್ವಾಗತಿಸಿದರು. ಬೆಂಗಳೂರಿನಲ್ಲಿ ಹಿರಿಯ ಸಿವಿಲ್​ ನ್ಯಾಯಧೀಶರಾಗಿರುವ ಗಣಪತಿ ಪ್ರಶಾಂತ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ ಎ.ಆರ್​. ವಂದಿಸಿದರು. ವಕೀಲೆ ಸಹನಾ ಕುಂದರ್​ ಕಾರ್ಯಕ್ರಮ ನಿರೂಪಿಸಿದರು.

ಕಕ್ಷಿದಾರರಿಗಾಗಿ ಸಮರ್ಥ ಕೆಲಸ ಮಾಡುವುದು, ಸಾಮಾಜಿಕ ಜವಾಬ್ದಾರಿ, ಕಾನೂನು ಚೌಕಟ್ಟು ಮೀರದೆ ಇರುವುದು. ಈ ಮೂರು ಕರ್ತವ್ಯಗಳನ್ನೂ ಶ್ರೀಪತಿ ಆಚಾರ್ಯರು ನಿಷ್ಠೆಯಿಂದ ನಿರ್ವಹಿಸುತ್ತಿದ್ದರು. | ಎ.ವಿ. ಚಂದ್ರಶೇಖರ. ಹೈಕೋರ್ಟ್​ನ ವಿಶ್ರಾಂತ ನ್ಯಾಯಾಧೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net