ಫೆಬ್ರವರಿಯಲ್ಲಿ ‘ಪಿಲಿ’ ಬಿಡುಗಡೆ

pili
Published on

ಮಂಗಳೂರು: ಎನ್.ಎನ್.ಎಂ.ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದ ತುಳು ಚಲನಚಿತ್ರ ‘ಪಿಲಿ’ ಫೆ.10ರಂದು ಬಿಡುಗಡೆಗೊಳ್ಳಲಿದೆ.

ಭರತ್ ರಾಮ್ ರೈ ಸಹ ನಿರ್ಮಾಪಕರಾಗಿದ್ದು, ಯುವ ನಟ ಭರತ್ ಭಂಡಾರಿ ಅವರು ಕಥೆ ಬರೆದು ನಾಯಕ ನಟನಾಗಿ ನಟಿಸುತ್ತಿದ್ದಾರೆ ಎಂದು ಚಿತ್ರದ ನಿರ್ದೇಶಕ ಮಯೂರ್ ಆರ್. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಗಳಲ್ಲಿ ಒಂದಾಗಿರುವ ಹುಲಿ ಕುಣಿತದ ಕಥಾವಸ್ತುವನ್ನು ಹೊಂದಿರುವಂತಹ ಚಿತ್ರ ಪಿಲಿ. ಹುಲಿ ಕುಣಿತದ ಗೌರವಕ್ಕೆ ಧಕ್ಕೆ ಬಂದಾಗ, ಆಚರಣೆಯಲ್ಲಿ ಆಗುವ ಲೋಪಗಳಿಗೆ ಏನೆಲ್ಲ ದೋಷ, ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಈ ಚಿತ್ರದ ಮೂಲಕ ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ ಎಂದರು.

ರಂಗಭೂಮಿ ಕಲಾವಿದ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನಾಗಿ ಭರತ್ ಭಂಡಾರಿ, ಜತೆಗೆ ಸ್ವಾತಿ ಶೆಟ್ಟಿ, ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ಸ್ವರಾಜ್ ಶೆಟ್ಟಿ, ಸಂತೋಷ್ ಶೆಟ್ಟಿ, ರೂಪಾ ಡಿ. ಶೆಟ್ಟಿ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ ಸೇರಿದಂತೆ ಹಲವಾರು ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಗಣೇಶ್ ನೀರ್ಚಾಲ್ ಅವರ ಸಂಕಲನ ಈ ಚಿತ್ರಕ್ಕಿದೆ. ನಾಲ್ಕು ಹಾಡುಗಳಿಗೆ ಮಯೂರ್ ಆರ್. ಶೆಟ್ಟಿ, ಡಿ.ಬಿ.ಸಿ. ಶೇಖರ್, ಕೆ.ಕೆ. ಪೇಜಾವರ್ ಸಾಹಿತ್ಯ ಬರೆದಿದ್ದಾರೆ. ಪೊಳಲಿ, ಕಟೀಲು, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ ಎಂದರು.

ಕಲಾವಿದರಾದ ಆತ್ಮಾನಂದ ರೈ, ಭರತ್ ಭಂಡಾರಿ, ಭೋಜರಾಜ ವಾಮಂಜೂರು, ಗಣೇಶ್ ನೀರ್ಚಾಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net