

ಸಂತೋಷ್‌ಕೃಷ್ಣ ಕುಂಬ್ಳೆ, ಮಂಗಳೂರು
ಖಾಸಗಿ ಸ್ವಾಮ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.3 ರೂಪಾಯಿ ಹಾಗೂ ಡೀಸೆಲ್‌ಗೆ 124 ರೂಪಾಯಿ. ಇದು ನಗರದ ಖಾಸಗಿ ತೈಲ ಮಾರಾಟ ಸಂಸ್ಥೆ (ಶೆಲ್)ಯ ಮಂಗಳೂರು ನಗರದ ಚಿಲ್ಲರೆ ಮಾರಾಟ ದರ. ಅಂದರೆ ಪೆಟ್ರೋಲ್‌ಗಿಂತಲೂ ಡೀಸೆಲ್ ಬೆಲೆ ದುಬಾರಿ!
ಸದ್ಯ ಖಾಸಗಿ ಕಂಪನಿಯ ಪೆಟ್ರೋಲ್ ಹಾಗೂ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮೊದಲಾದ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪ್ರತಿ ಲೀಟರ್‌ಗೆ ಇರುವ ವ್ಯತ್ಯಾಸ ಪೆಟ್ರೋಲ್‌ಗೆ ಬರೊಬ್ಬರಿ 10.17 ರೂ. ಹಾಗೂ ಡೀಸೆಲ್‌ಗೆ 36.87 ರೂ. ಮೊದಲೇ ತೈಲ ಬೆಲೆಯ ನಾಗಾಲೋಟಕ್ಕೆ ಕಂಗೆಟ್ಟ ಜನಸಾಮಾನ್ಯರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಚ್ಚಾತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳು ಪಂಪ್‌ಗಳಿಗೆ ಸಾಕಷ್ಟು ತೈಲ ಪೂರೈಸುತ್ತಿರಲಿಲ್ಲ, ಇದರಿಂದ ಖಾಸಗಿ ಪಂಪ್‌ಗಳಲ್ಲಿ ಡ್ರೈಔಟ್ ಎಂದು ಫಲಕಗಳು ಸಾಮಾನ್ಯವಾಗಿತ್ತು. ಜೂ.17ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಪಂಪ್‌ಗಳನ್ನು ಸಾರ್ವತ್ರಿಕ ಸೇವಾ ಬಾಧ್ಯತೆ(ಯುಎಸ್‌ಒ) ಅಡಿಯಲ್ಲಿ ತಂದು ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಪೂರೈಕೆ ನಿರಂತರವಾಗಿರಬೇಕು ಎಂದು ಸೂಚನೆ ನೀಡಿತ್ತು. ಹೀಗಾಗಿ ಜಿಯೋ-ಬಿಪಿ, ನಯಾರಾ ಎನರ್ಜೀಸ್ ಮೊದಲಾದ ಖಾಸಗಿ ಇಂಧನ ಮಾರುಕಟ್ಟೆ ಕಂಪನಿಗಳು ಚಿಲ್ಲರೆ ವ್ಯಾಪಾರಿಗಳಿಗೆ ಪೆಟ್ರೋಲ್ ಪಂಪ್‌ಗಳನ್ನು ತೆರೆದಿಡಲು ಮತ್ತು ಡ್ರೈಔಟ್ ಫಲಕಗಳನ್ನು ಅಳವಡಿಸದಂತೆ ಸೂಚನೆ ನೀಡಿದ್ದು, ಇಂಧನ ಮಾರಾಟ ಕುಂಠಿತಗೊಳಿಸಲು ಬೆಲೆ ಹೆಚ್ಚಿಸಿದ್ದವು.
ಪೆಟ್ರೋಲ್ ಉತ್ಪನ್ನಗಳ ರಿಫೈನಿಂಗ್ ಮಾರ್ಜಿನ್ ಚೆನ್ನಾಗಿದ್ದ ಕಾರಣ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಮತ್ತು ಹಣದುಬ್ಬರ ನಿಯಂತ್ರಣಕ್ಕಾಗಿ ಮಾರುಕಟ್ಟೆಯಲ್ಲಿ ಸ್ವಲ್ಪ ನಷ್ಟ ಇಟ್ಟುಕೊಂಡು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಸರ್ಕಾರದಿಂದ ನೇರ ಆದೇಶ ಇದೆ. ಐಒಸಿಎಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಬಿಪಿಸಿಎಲ್ ಮೊದಲಾದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಕಚ್ಚಾಯ ತೈಲದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಸಂದರ್ಭ ಪೆಟ್ರೋಲ್‌ನಲ್ಲಿ ಆದ ನಷ್ಟವನ್ನು ಬೇರೆ ಉತ್ಪನ್ನಗಳಲ್ಲಿ ತುಂಬುತ್ತವೆ.
ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಪೆಟ್ರೋಲ್‌ಗೆ ಈ ಹಿಂದೆ ಇದ್ದ ದರದ ಅಂತರ ಮೊದಲಿಗಿಂತ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗಬಹುದು ಎಂದು ದ.ಕ. ಮತ್ತು ಉಡುಪಿ ಪೆಟ್ರೋಲ್ ಪಂಪ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಸತೀಶ್ ಕಾಮತ್ ಹೇಳುತ್ತಾರೆ.
ಸದ್ಯ ಕೇರಳದಲ್ಲಿ ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 106.99 ರೂ. ಮತ್ತು ಡೀಸೆಲ್‌ಗೆ 95.83 ರೂ. ಇದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿದ್ದಾಗ ಅಲ್ಲಿನ ರಾಜ್ಯ ಸರ್ಕಾರ ಸುಂಕದಲ್ಲಿ ಪೆಟ್ರೋಲ್‌ಗೆ ಕೇವಲ 2.41 ರೂ. ಹಾಗೂ ಡೀಸೆಲ್‌ಗೆ 1.36 ರೂ.ಕಡಿಮೆ ಮಾಡಿತ್ತು. ಇದೇ ಸಂದರ್ಭ ಕರ್ನಾಟಕ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 7 ರೂ. ಸುಂಕ ಕಡಿಮೆ ಮಾಡಿದ ನಂತರ ಕರ್ನಾಟಕದಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 101 ರೂ. ಆಸುಪಾಸಿನಲ್ಲಿ ಬಂದು ನಿಂತಿತ್ತು. ಆದರೆ ಕೇರಳಕ್ಕೆ ಹೋಲಿಸಿ ನೋಡಿದಾಗ ಕರ್ನಾಟಕದ ಖಾಸಗಿ ಕಂಪನಿಗಳ ಪ್ರತೀ ಲೀ. ಪೆಟ್ರೋಲ್‌ಗೆ 4.3 ರೂ. ಹಾಗೂ ಡೀಸೆಲ್ ದರ 28.17 ರೂ. ಅಧಿಕವಾದಂತಾಗಿದೆ.
ಜುಲೈ 21ರಂದು ವಿವಿಧೆಡೆ ಇಂಧನ ದರ
ಇಂಡಿಯನ್ ಆಯಿಲ್:
ಪೆಟ್ರೋಲ್-101.13 ರೂ.
ಡೀಸೆಲ್ - 87.13 ರೂ
ಭಾರತ್ ಪೆಟ್ರೋಲ್:
ಪೆಟ್ರೋಲ್-101.20 ರೂ.
ಡೀಸೆಲ್ -87.19 ರೂ.
ಎಂಆರ್‌ಪಿಎಲ್:
ಪೆಟ್ರೋಲ್-101.13 ರೂ.
ಡೀಸೆಲ್ -87.13 ರೂ.
ಶೆಲ್:
ಪೆಟ್ರೋಲ್-111.3 ರೂ.
ಡೀಸೆಲ್ - 124.6 ರೂ.
ರಿಲಯನ್ಸ್:
ಪೆಟ್ರೋಲ್-108.3 ರೂ.
ಡೀಸೆಲ್ - 92.44 ರೂ.
ನಯಾರಾ ಎನರ್ಜಿಸ್:
ಪೆಟ್ರೋಲ್-106.13 ರೂ.
ಡೀಸೆಲ್- 90.13 ರೂ.
ದರ ಏರಿಕೆ ಮಾಡದಂತೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ಸರ್ಕಾರದಿಂದ ಸೂಚನೆಯಿದೆ. ಆದ್ದರಿಂದಲೇ ಸರ್ಕಾರಿ ಸ್ವಾಮ್ಯದ ಕಂಪನಿಗಳ ದರಕ್ಕಿಂತ ಖಾಸಗಿಯವರ ದರ ಹೆಚ್ಚಿರಲು ಕಾರಣ. ಮುಂದಿನ ದಿನಗಳಲ್ಲಿ ಇದು ಕಡಿಮೆಯಾಗಬಹುದು.
ಶಿವಾನಂದ ಪ್ರಭು, ದ.ಕ. ಮತ್ತು ಉಡುಪಿ ಪೆಟ್ರೋಲ್ ಪಂಪ್ ಮಾಲೀಕರ ಸಂಘದ ಅಧ್ಯಕ್ಷ
ಕೆಲವು ತಿಂಗಳಿಂದ ಖಾಸಗಿ ಪೆಟ್ರೋಲ್ ಪಂಪ್‌ಗಳಲ್ಲಿ ದೊಡ್ಡ ಅಂತರದಲ್ಲಿ ದರ ವ್ಯತ್ಯಾಸ ಇರುವುದು ಹೌದು. ಇದು ಇಂಧನ ಮಾರಾಟದ ಮೇಲೂ ಪರಿಣಾಮ ಬೀರಿದೆ. ನಮ್ಮಲ್ಲಿಂದ ಪೆಟ್ರೋಲ್ ಹಾಕಿಸುವ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಾಗಿದೆ. ದರ ವ್ಯತ್ಯಾಸದ ಅರಿವಿಲ್ಲದೆ ಪೆಟ್ರೋಲ್ ಹಾಕಿಸಿಕೊಂಡವರು ನಂತರ ಬೆಲೆ ನೋಡಿ ವಾಗ್ವಾದಕ್ಕಿಳಿಯುವುದು ಸಾಮಾನ್ಯವಾಗಿದೆ.
ಖಾಸಗಿ ಪೆಟ್ರೋಲ್ ಪಂಪ್ ಉದ್ಯೋಗಿ