

ನರೇಂದ್ರ ಎಸ್. ಮರಸಣಿಗೆ ಹೆಬ್ರಿ
ಲಾಕ್‌ಡೌನ್‌ನಲ್ಲಿ ಯಾವುದೇ ಕಸುಬುಗಳು ಇಲ್ಲದೆ ಸುಮಾರು 25 ವರ್ಷಗಳಿಂದ ಹಡಿಲು ಬಿದ್ದಿದ್ದ ಭೂಮಿಯಲ್ಲಿ ಅವಿರತ ಶ್ರಮದಿಂದ ಭತ್ತ ಬೆಳೆದು ಬಂಗಾರದಂತಹ ಫಸಲು ತೆಗೆದು ನಾಲ್ವರು ಮಹಿಳೆಯರು ಇತರರಿಗೆ ಮಾದರಿಯಾಗಿದ್ದಾರೆ.
ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ದುರ್ಗಾ ಸಂಜೀವಿನಿ ಒಕ್ಕೂಟದ ಸುಗಂಧಿ ನಾಯ್ಕ, ಸುಚಿತ್ರಾ ನಾಯ್ಕ, ಜಯಲಕ್ಷ್ಮೀ ನಾಯ್ಕ ಹಾಗೂ ಸುಮಿತ್ರಾ ನಾಯ್ಕ ಈ ಸಾಧಕರು. ಪರಿಶಿಷ್ಟ ಪಂಗಡದ ಈ ಮಹಿಳೆಯರ ಯಶೋಗಾಥೆ ಸಮಾಜಕ್ಕೆ ಪ್ರೇರಣೆಯಾಗಿದೆ.
ಕೆಳಮುಳ್ಳು ಗುಡ್ಡೆಯಲ್ಲಿ 3 ಎಕರೆ ಹಾಗೂ ಕೆರೆಬೆಟ್ಟು ಗ್ರಾಮದ ಕುಂದಾರಿನಲ್ಲಿ 7ಎಕರೆ ಬೇಸಾಯ ಮಾಡಿದ್ದಾರೆ. ಕಳೆದ ವರ್ಷ 3 ಎಕರೆ ಮಾಡಲಾಗಿದ್ದು, ಈ ವರ್ಷದಲ್ಲಿ ಒಟ್ಟು 10 ಎಕರೆ ಮಾಡಲಾಗಿದೆ. ಕಳೆದ ತಿಂಗಳು ಕಟಾವು ಮಾಡಿದ್ದು, 100 ಕ್ವಿಂಟಾಲ್ ಭತ್ತ ದೊರಕಿದೆ. ನಾಲ್ವರು ಸೇರಿ 2 ಲಕ್ಷ ರೂ. ಸಾಲ ಪಡೆದು ಕೃಷಿ ಪಡೆದಿದ್ದು, ಲಾಭ ಆಗದಿದ್ದರೂ ಅಸಲು ಪಡೆದಿದ್ದಾರೆ. ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿದ್ದರೂ ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಹಡಿಲು ಭೂಮಿ ಕೃಷಿಯನ್ನು ಮಾಡುತ್ತೇವೆ ಎಂಬ ಆಶಾವಾದ ಹೊಂದಿದ್ದಾರೆ.
ಮಳೆಯಿಂದ ಲಕ್ಷ ರೂ. ನಷ್ಟ
ಅಕಾಲಿಕ ಮಳೆಯಿಂದಾಗಿ ಹುಲ್ಲನ್ನು ಸಂಗ್ರಹಿಸಲು ಸಾಧ್ಯವಾಗದೆ ಗದ್ದೆಯಲ್ಲೇ ಕೊಳೆತು ಹೋದ ಕಾರಣ ಒಂದು ಲಕ್ಷ ರೂಪಾಯಿಯಷ್ಟು ನಷ್ಟ ಸಂಭವಿಸಿದೆ. ಗದ್ದೆಯಲ್ಲಿ ಭತ್ತ ಕೊಳೆಯದಿದ್ದರೆ ಒಟ್ಟು ಒಂದು ಲಕ್ಷ ರೂಪಾಯಿ ಲಾಭವಾಗುತ್ತಿತ್ತು ಎಂದು ಸದಸ್ಯರು ಹೇಳುತ್ತಾರೆ. ಇಷ್ಟಾದರೂ ಸುಗ್ಗಿ ಬೆಳೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುತ್ತೇವೆ ಎನ್ನುತ್ತಾರೆ ಅವರು.
ಹಡಿಲು ಭೂಮಿಯನ್ನು ಮಾಡಲು ಕಾರಣ
ಮಹಿಳೆಯರು ಹಾಳೆತಟ್ಟೆ ಮಾಡುತ್ತಿದ್ದು, ಕರೊನಾ ಕಾರಣದಿಂದಸಭೆ-ಸಮಾರಂಭಗಳಿಲ್ಲದೆ ವ್ಯವಹಾರ ನಿಂತಿತು. ಸಾಲ ತೀರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಜೀವನೋಪಾಯಕ್ಕಾಗಿ ಮುಖಂಡ ಶಿವಪುರ ಸುರೇಶ್ ಶೆಟ್ಟಿ ಅವರಲ್ಲಿ ಹಡಿಲು ಭೂಮಿ ಸಾಗುವಳಿ ಪ್ರಸ್ತಾವನೆ ಇಟ್ಟಾಗ 25 ವರ್ಷಗಳಿಂದ ಹಡಿಲು ಬಿದ್ದಿದ್ದ ಭೂಮಿಯನ್ನು ಹೊಂದಿಸಿಕೊಟ್ಟಿದ್ದರು ಎನ್ನುತ್ತಾರೆ ಸುಗಂಧಿ. ಗದ್ದೆ ಹದ ಮಾಡುವುದರಿಂದ ಹಿಡಿದು, ಭತ್ತದ ಕಳೆ ತೆಗೆದು, ಉಳುಮೆ ಮಾಡಿ ನಾಟಿಯ ಸಂದರ್ಭದಲ್ಲಿ ತಂಡದ ಸದಸ್ಯರು, ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯ ಜನರು ಉತ್ಸಾಹದಿಂದ ಭಾಗಿಯಾಗಿದ್ದಾರೆ. ಸದ್ಯ ಭತ್ತದ ಕೊಯ್ಲು ಮುಗಿದಿದ್ದು ಸುಗ್ಗಿಯ ನಾಟಿಗಾಗಿ ಹತ್ತು ಎಕರೆಗೆ ಬೇಕಾಗುವಷ್ಟು ಚಾಪೆ ನೇಜಿ ಸಿದ್ಧಪಡಿಸಲಾಗಿದೆ.
ಸುಗ್ಗಿಯಲ್ಲಿ ಲಾಭ ನಿರೀಕ್ಷೆ
ಕರಾವಳಿ ಭಾಗದಲ್ಲಿ ಬಹುತೇಕ ರೈತರು ಸುಗ್ಗಿ ಬೆಳೆಯಲ್ಲಿ ಲಾಭ ಪಡೆಯುತ್ತಾರೆ. ಅಕಾಲಿಕ ಮಳೆಯಿಂದ ಹುಲ್ಲು ಹಾಗೂ ಭತ್ತಕ್ಕೆ ಹಾನಿಯಾಗಿದ್ದು ಇವೆಲ್ಲವನ್ನು ಸುಗ್ಗಿ ಬೆಳೆಯಲ್ಲಿ ಸಮರ್ಪಕವಾಗಿ ನಿಭಾಯಿಸಿ ಲಾಭ ಹೊಂದುವ ಗುರಿಯನ್ನು ಮಹಿಳೆಯರು ಹೊಂದಿದ್ದಾರೆ. ಈ ಬಾರಿ ಯಾಂತ್ರಿಕ ನಾಟಿ ಮಾಡಲು ನಿರ್ಧರಿಸಿದ್ದು, ಎಲ್ಲರ ಮನೆ ಅಂಗಳದಲ್ಲಿ ಚಾಪೆ ನೇಜಿ ಮಾಡಲಾಗಿದೆ. ಈ ಸಲ ಲಾಭಾವಾದರೆ ಸ್ವಲ್ಪ ಭಾಗವನ್ನು 10 ಬಡ ಕುಟುಂಬಗಳಿಗೆ ನೀಡಲು ನಿರ್ಧರಿಸಿದ್ದಾರೆ.
ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಿ
ಹಡಿಲು ಭೂಮಿ ಕೃಷಿ ಮಾಡುವ ಆಸಕ್ತ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಿದಾಗ ಭತ್ತ ಬೇಸಾಯಕ್ಕೆ ಉತ್ತೇಜನ ಸಿಗುತ್ತದೆ. ಮಹಿಳೆಯರ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಡಿಲು ಭೂಮಿ ಕೃಷಿಗೆ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ನರೇಗಾ ಇನ್ನಷ್ಟು ಕ್ರಿಯಾಶೀಲವಾಗಲಿ ಎನ್ನುತ್ತಾರೆ ದುರ್ಗಾ ಸಂಜೀವಿನಿ ಒಕ್ಕೂಟದ ತಂಡದ ಮಹಿಳೆಯರು.
ಎನ್‌ಆರ್‌ಎಲ್‌ಎಂ ಶ್ಲಾಘನೆ
ಕೇಂದ್ರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಮಹಿಳೆಯರ ಸಾಧನೆ ಹಾಗೂ ಆಸಕ್ತಿಯನ್ನು ಶ್ಲಾಘಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ಹಾಗೂ ಇಒ ಶಶಿಧರ್ ಅವರೂ ಅಭಿನಂದಿಸಿ, ಪ್ರೋತ್ಸಾಹ ನೀಡಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಶಿವ ದುರ್ಗಾ ಸಂಜೀವಿನಿ ಒಕ್ಕೂಟದ ಸದಸ್ಯರು ಜೀವನೋಪಯಕ್ಕಾಗಿ ಹಡಿಲು ಭೂಮಿಯ ಬಗ್ಗೆ ಪ್ರಸ್ತಾಪನೆ ಮಾಡಿದಾಗ, ಊರವರ ಸಹಕಾರದಿಂದ ಭೂಮಿ ಹೊಂದಿಸಿ ಕೊಡಲಾಯಿತು. ಫಲಿತಾಂಶ ಗಮನಿಸಿದಾಗ ಸ್ತ್ರೀಯರು ಕೂಡ ಏನನ್ನೂ ಸಾಧಿಸಬಹುದು ಎನ್ನುವುದು ಮನದಟ್ಟಾಗಿದೆ. ಅವಿರತ ಶ್ರಮಕ್ಕೆ ಸಂದ ಗೆಲುವು ಇದಾಗಿದೆ.
ಶಿವಪುರ ಸುರೇಶ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ, ಶಿವಪುರ ಗ್ರಾಪಂ
ಲಾಕ್‌ಡೌನ್‌ನಲ್ಲಿ ಯಾವುದೇ ಸಭೆ-ಸಮಾರಂಭಗಳಿಲ್ಲದೆ ಹಾಳೆ ತಟ್ಟೆ ಮಾಡುವ ಕಾಯಕ ನಷ್ಟ ಅನುಭವಿಸಿತು. ಜೀವನೋಪಯಕ್ಕಾಗಿ ಹಡಿಲು ಭೂಮಿ ಕೃಷಿಯನ್ನು ಮಾಡಲಾಯಿತು. ಆರಂಭದಲ್ಲಿ ಅಡೆತಡೆಗಳು ಬಂದರೂ ಸಮರ್ಪಕವಾಗಿ ನಿಭಾಯಿಸಿ ಕೃಷಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮರ್ಪಕವಾಗಿ ಮಾಡಲಾಗುವುದು.
ಸುಗಂಧಿ ನಾಯ್ಕ, ದುರ್ಗಾದೇವಿ ತಂಡದ ಕೋಶಾಧಿಕಾರಿ
ಶಿವ ದುರ್ಗಾ ಸಂಜೀವಿನಿ ಸ್ವಸಹಾಯ ಸಂಘ ಮಹಿಳೆಯರ ಸಾಧನೆಗೆ ಮೆಚ್ಚಲೇಬೇಕು. ಸುಮಾರು 10 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಮಾಡಿ ಇತರ ಸಂಘ ಸಂಸ್ಥೆಯವರಿಗೆ ಮಾದರಿಯಾಗಿದ್ದಾರೆ. ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿದ್ದರೂ ಪಟ್ಟುಬಿಡದೆ ಮತ್ತೆ ಕೃಷಿಯಲ್ಲಿ ತೊಡಗಿಸಿಕೊಂಡಿರುವುದನ್ನು ಗಮನಿಸಿದರೆ ಉತ್ತಮ ಬೆಳವಣಿಗೆ ಎಂದೆನಿಸುತ್ತದೆ.
ಡಾ. ನವೀನ್ ಭಟ್, ಸಿಇಒ, ಉಡುಪಿ ಜಿಪಂ