ನ್ಯಾಮತಿ ತಾಲೂಕಿನಲ್ಲಿ ಕೆರೆ- ಕಟ್ಟೆಗಳಿಗೆ ಬಂದ ಜಲ

Nyamati, Rameshwar, lake, water,
Published on

ನ್ಯಾಮತಿ: ನಿರಂತರವಾಗಿ ಸುರಿಯುತ್ತಿರುವ ಪುನರ್ವಸು ಮಳೆಯಿಂದಾಗಿ ನ್ಯಾಮತಿ ತಾಲೂಕಾದ್ಯಂತ ಸೋಮವಾರ ಕೆರೆ- ಕಟ್ಟೆಗಳಿಗೆ ನೀರಿನ ಹರಿವು ಹೆಚ್ಚಾಗುತ್ತಿದ್ದು, ಜೀವಕಳೆ ಬಂದಿದೆ.

ಕಳೆದ ಭಾನುವಾರದಿಂದ ಸತತ ಮಳೆಯಾಗುತ್ತಿದ್ದು, ಸೋಮವಾರ ಸುರಹೊನ್ನೆ ಗ್ರಾಮದಲ್ಲಿ 2 ಮತ್ತು ಬಿದರಹಳ್ಳಿ ಗ್ರಾಮದಲ್ಲಿ 1 ಮನೆ ಗೋಡೆಗೆ ಹಾನಿ ಉಂಟಾಗಿದೆ. ಕುದುರೆಕೊಂಡ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ, ಕೆಲವು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಯಾವುದೇ ರೀತಿಯ ಜೀವಹಾನಿ ಸಂಭವಿಸಿಲ್ಲ.

ಇಲ್ಲಿಯತನಕ ಸುರಿದ ಹದ ಮಳೆಯಿಂದ ಬೆಳೆಗಳು ಹುಲುಸಾಗಿ ಬೆಳೆದಿದ್ದು, ಜಮೀನುಗಳಲ್ಲಿ ಅಲ್ಲಲ್ಲಿ ನೀರು ನಿಂತಿದೆ. ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.

ರಾಮೇಶ್ವರ ಗ್ರಾಮದ ಅಂದಾಜು 15 ಎಕರೆ ವಿಸ್ತೀರ್ಣದ ಚಿಕ್ಕಾರಿಕಟ್ಟೆ ಕೆರೆಗೆ ಶೇ. 90 ನೀರು ಸಂಗ್ರಹವಾಗಿದೆ. ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕೆರೆಯ ಹೂಳೆತ್ತಿದ್ದಕ್ಕೆ ನೀರಿನ ಸಂಗ್ರಹ ಹೆಚ್ಚಾಗಿರುವುದಾಗಿ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಳಗುತ್ತಿಯಲ್ಲಿ ಅತ್ಯಧಿಕ: ಸವಳಂಗ 56.4ಮಿ.ಮೀ, ಬೆಳಗುತ್ತಿ 66.8, ಗೋವಿನಕೊವಿ 38.4 ಮಳೆಯಾಗಿದ್ದು, ಮಂಗಳವಾರವೂ ಮಳೆ ಮುಂದುವರಿದಿದೆ.

ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ: ಮಳೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ತಾಲೂಕು ಶಿಕ್ಷಣ ಇಲಾಖೆ ಶಾಲಾ- ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಿದ್ದು, ಮುಂದಿನ ದಿನಗಳಂದು ಅದನ್ನು ಸರಿದೂಗಿಸುವಂತೆ ಆದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net