ಕಾಂಗ್ರೆಸ್ ಎಷ್ಟೇ ಟೋಕನ್ ಕೊಟ್ಟರೂ ಗೆಲ್ಲುವುದು ಎನ್​ಡಿಎ ಅಭ್ಯರ್ಥಿಗಳೇ

PralhadJoshi Slams Siddaramaiah
Published on

ಹುಬ್ಬಳ್ಳಿ : ರಾಜ್ಯ ವಿಧಾನಸಭೆ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ‘ಟೋಕನ್‘ ಮೊರೆ ಹೋಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶತಾಯ ಗತಾಯ ಉಪ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಭರದಲ್ಲಿ ಕಾಂಗ್ರೆಸ್ ಪಕ್ಷ ಟೋಕನ್ ಮೂಲಕ ಹಣ ಹಂಚಿಕೆ ಶುರು ಮಾಡಿದೆ ಎಂದು ಹೇಳಿದರು.

ಹಂಚಿಕೆಯಾದ ಟೋಕನ್ ತೋರಿಸಿದವರಿಗೆ ಹಣ ಕೊಟ್ಟು ಕಳಿಸುವ ವ್ಯವಸ್ಥೆಯನ್ನು ಕಾಂಗ್ರೆಸ್ ಮಾಡಿದೆ ಎಂಬುದು ಮಾದ್ಯಮಗಳಲ್ಲಿ ವರದಿಯಾಗಿದೆ ಎಂದು ಉಲ್ಲೇಖಿಸಿದ ಸಚಿವ ಜೋಶಿ, ಕಾಂಗ್ರೆಸ್ ಲೂಟಿ ಮಾಡಿದ್ದನ್ನು ಉಪ ಚುನಾವಣೆಯಲ್ಲಿ ಟೋಕನ್ ಮೂಲಕ ಹಂಚುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಅದೆಷ್ಟೇ ಟೋಕನ್ ಹಂಚಿದರೂ ಉಪ ಚುನಾವಣೆಯಲ್ಲಿ ಗೆಲ್ಲುವುದು ಎನ್​ಡಿಎ ಅಭ್ಯರ್ಥಿಗಳೇ. ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಪರ ಒಲವಿದೆ. ಪ್ರಚಾರ ವೇಳೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹಾಗಾಗಿ ಎನ್​ಡಿಎ ಅಭೂತಪೂರ್ವ ಗೆಲುವು ಸಾಧಿಸಲಿದೆ. ಸಂಡೂರು, ಶಿಗ್ಗಾಂವಿಯಲ್ಲಿ ಬಿಜೆಪಿ ಮತ್ತು ಚನ್ನಪಟ್ಟಣದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ಸಚಿವ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ವಕ್ಪ್ ವಿವಾದದಲ್ಲಿ ಕಾಂಗ್ರೆಸ್ ‘ಜನರ ದಿಕ್ಕು ತಪ್ಪಿಸೋ ಅಭಿಯಾನ‘ ಶುರು ಮಾಡಿದೆ ಎಂದು ಆರೋಪಿಸಿದ ಪ್ರಲ್ಹಾದ ಜೋಶಿ , ಯಾವುದೇ ವಿವಾದ, ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವುದು, ಮಿಸ್ ಗೈಡ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿ ಆಗಿಬಿಟ್ಟಿದೆ ಎಂದು ಹರಿಹಾಯ್ದರು.

ವಕ್ಪ್ ಆಸ್ತಿ ಸಂರಕ್ಷಿಸುವ ಕೆಲಸವನ್ನು ಬಿಜೆಪಿ ಈ ಹಿಂದೆಯೂ ಮಾಡಿದೆ, ಮುಂದೆಯೂ ಮಾಡುತ್ತದೆ. ಆದರೆ, ವಕ್ಪ್ ಅಥವಾ ವಕ್ಪ್ ಹೆಸರಲ್ಲಿ ಭೂಗಳ್ಳರು ಬಡವರ, ರೈತರ, ಜನಸಾಮಾನ್ಯರ ಆಸ್ತಿ ಕಬಳಿಸಲು ಹೊರಟರೆ ಬಿಡುವುದಿಲ್ಲ. ಅನ್ವರ್ ಮಾನಪ್ಪಾಡಿ ವರದಿ ಪ್ರಕಾರ ಕಾಂಗ್ರೆಸ್ಸಿನ ಅತ್ಯಂತ ಪ್ರಭಾವಿ ನಾಯಕರೇ ವಕ್ಪ್ ನ 29,000 ಎಕರೆ ಆಸ್ತಿ ಹೊಡೆದಿದ್ದಾರೆ. ವಿಧಾನ ಪರಿಷತ್ತಿನ ಹಕ್ಕು ಭಾದ್ಯತಾ ಸಮಿತಿ ಸಹ ಮಾನಪ್ಪಾಡಿ ವರದಿ ಪರಿಶೀಲನೆ ಮಾಡಿ, ಮತ್ತೊಂದು ವರದಿ ಕೊಟ್ಟಿದೆ. ವಕ್ಪ್ ಆಸ್ತಿ ದುರುಪಯೋಗ ಆಗಿದೆ ಎಂಬ ಅಂಶ ಅದರಲ್ಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಪ್ರತಿ ತಿಂಗಳು ಉತಾರ ಪರಿಶೀಲಿಸಿ : ಎಲ್ಲೇ ಆಗಲಿ ವಕ್ಪ್ ಆಸ್ತಿ ಮಾಡಲು ಅಧಿಕಾರಿಗಳು ಬಂದರೆ ಜನರೆಲ್ಲ ಸೇರಿ ಅವರನ್ನು ಓಡಿಸಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ ಕೊಟ್ಟಿದ್ದಾರೆ.

ಈಗಿನ ಸರ್ಕಾರದಲ್ಲಿ ಯಾರ ಮತ್ತು ಯಾವ ಜಮೀನು ವಕ್ಪ್ ಆಸ್ತಿ ಎಂದಾಗುತ್ತದೋ ಗೊತ್ತಿಲ್ಲ. ಹಾಗಾಗಿ, ಪ್ರತಿಯೊಬ್ಬರೂ ಪ್ರತಿ ತಿಂಗಳು ತಮ್ಮ ಉತಾರ ತೆಗೆಯಿಸಿ ಪರಿಶೀಲಿಸುತ್ತಿರಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೋಗುವವರೆಗೆ ಮತ್ತು ಲೋಕಸಭೆಯಲ್ಲಿನ ವಕ್ಪ್ ತಿದ್ದುಪಡಿ ಮಸೂದೆ ಪಾಸ್ ಆಗುವವರೆಗೆ ಎಲ್ಲರೂ ಪಹಣಿ ಪರಿಶೀಲಿಸುತ್ತಿರಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್​ನವರು ಮಹಾನ್ ಕಳ್ಳರಿದ್ದಾರೆ. ತುಷ್ಟೀಕರಣ ರಾಜಕಾರಣದ ಪರಾಕಾಷ್ಟೆ ತಲುಪಿದ್ದಾರೆ. ಯಾವುದೇ ಸಂದರ್ಭದಲ್ಲಿ ನಿಮ್ಮ ಆಸ್ತಿಯನ್ನು ವಕ್ಪ್ ಮೂಲಕ ಕಬಳಿಸಬಹುದು. ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವ ಮುರುಗೇಶ ನಿರಾಣಿ, ಎಂಎಲ್​ಸಿ ರವಿಕುಮಾರ, ಮಾಜಿ ಶಾಸಕಿ ಸೀಮಾ ಮಸೂತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net