

ರಾಣೆಬೆನ್ನೂರ: ದುಡ್ಡಿನ ಆಮಿಷಕ್ಕೆ ಕೆಲಸವನ್ನು ಬಲಿ ಕೊಡಬೇಡಿ. ನಮ್ಮ ಅಧಿಕಾರಾವಧಿ ಮುಗಿಯಲು ಕೇವಲ ಏಳು ತಿಂಗಳು ಬಾಕಿ ಇದೆ. ಕ್ಷೇತ್ರದಲ್ಲಿ ಈವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಾಗಿಲ್ಲ. ಜನತೆ ಕೇಳಿದರೆ ಏನು ಉತ್ತರ ಕೊಡಬೇಕು…!
ಹೀಗೆಂದು ನಗರದ ತಾಪಂ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಚೈತ್ರಾ ಮಾಗನೂರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಆರಂಭದಲ್ಲಿ ತಾಪಂ ವ್ಯವಸ್ಥಾಪಕ ಬಸವರಾಜ ಶಿಡೇನೂರ 2020-21ನೇ ಸಾಲಿನ ಅನುದಾನ ಒದಗಿಸುವ ಹಾಗೂ 2019-20ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರ ಮಂಡಿಸಿ ಅನುಮೋದನೆ ನೀಡಲು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚೈತ್ರಾ ಮಾಗನೂರ, ತಾಲೂಕು ಮಟ್ಟದ ಬಹುತೇಕ ಇಲಾಖೆಯ ಅಧಿಕಾರಿಗಳು ಯಾವ ಕೆಲಸವನ್ನೂ ಪೂರ್ಣ ಮಾಡಲಿಲ್ಲ. ಕೇಳಿದರೆ ಕರೊನಾ ನೆಪ ಹೇಳುತ್ತಿದ್ದಾರೆ. ಹಾಗಾದರೆ ಕರೊನಾ ಐದು ವರ್ಷದಿಂದ ಇವರನ್ನು ಕಾಡುತ್ತಿದೆಯೇ ಎಂದು ಪ್ರಶ್ನಿಸಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಕ್ಕಿಂತ ಕಳಪೆ ಕಾಮಗಾರಿಯೇ ಹೆಚ್ಚಾಗಿ ನಡೆದಿದೆ. ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.
ನೀಲಕಂಠಪ್ಪ ಕೂಸಗೂರ ಮಾತನಾಡಿ, ನಿಯಮಾವಳಿ ಪ್ರಕಾರ ವಾರ್ಷಿಕ ಲೆಕ್ಕ ಪತ್ರವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸುವ ಮುನ್ನ ಸ್ಥಾಯಿ ಸಮಿತಿ ಸಭೆ ಕರೆದು ರ್ಚಚಿಸಿ ಟಿಪ್ಪಣಿಯೊಂದಿಗೆ ಸಾಮಾನ್ಯ ಸಭೆಗೆ ತರಬೇಕು. ಆದರೆ, ಅಧಿಕಾರಿಗಳು ಮನಬಂದಂತೆ ಸಾಮಾನ್ಯ ಸಭೆಯಲ್ಲಿ ಓದಿ ಅನುಮೋದನೆ ಕೇಳಿದರೆ ಹೇಗೆ ? ಪ್ರತಿವರ್ಷವೂ ಇದೇ ರೀತಿ ಮಾಡುತ್ತೀರಿ. ನಾವು ಅನುಮೋದನೆ ಕೊಡುವುದಿಲ್ಲ ಎಂದರು. ಇದಕ್ಕೆ ಎಲ್ಲ ಸದಸ್ಯರು ಧ್ವನಿಗೂಡಿಸಿದರು.
ಇಒ ಎಸ್.ಎಂ. ಕಾಂಬಳೆ ಮಾತನಾಡಿ, ಸ್ಥಾಯಿ ಸಮಿತಿ ಸಭೆಯಲ್ಲಿ ರ್ಚಚಿಸಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ, ಕರೊನಾ ಹೆಚ್ಚುತ್ತಿರುವ ಹಾಗೂ ಇತರ ಕಾರಣಾಂತರದಿಂದ ಮಾಡಲು ಸಾಧ್ಯವಾಗಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಕರೊನಾ ಈಗ ಬಂದಿದೆ. ಆದರೆ, ಎರಡ್ಮೂರು ವರ್ಷದಿಂದ ಕರೊನಾ ಇತ್ತೇ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಇಒ ಎಸ್.ಎಂ. ಕಾಂಬಳೆ, ಲೆಕ್ಕ ಪತ್ರಕ್ಕೆ ಈಗ ಅನುಮೋದನೆ ಬೇಡ. ಸ್ಥಾಯಿ ಸಮಿತಿಯಲ್ಲಿ ರ್ಚಚಿಸಿದ ಬಳಿಕ ಅನುಮೋದನೆ ಪಡೆದುಕೊಳ್ಳೋಣ ಎಂದು ಈ ವಿಚಾರವನ್ನು ಕೈ ಬಿಟ್ಟರು.
ಅಧ್ಯಕ್ಷೆ ಗೀತಾ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷೆ ರಾಜು ಸೂರ್ವೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪರಿಹಾರ ವಿತರಣೆಗೆ ವಿಳಂಬ: ಭರಮಪ್ಪ ಊರ್ವಿು ಮಾತನಾಡಿ, ಕಳೆದ ವರ್ಷದ ಆಗಸ್ಟ್ನಲ್ಲಿ ಉಂಟಾದ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮರಳಿ ಆಗಸ್ಟ್ ತಿಂಗಳು ಬಂದರೂ ಈವರೆಗೂ ಪರಿಹಾರ ಬಂದಿಲ್ಲ. ಈ ಬಗ್ಗೆ ಮಾಹಿತಿ ಕೇಳಿದರೂ ತಹಸೀಲ್ದಾರ್ ಕಚೇರಿಯಲ್ಲಿ ನೀಡುತ್ತಿಲ್ಲ. ಹಾಗಾದರೆ ಪರಿಹಾರ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇಒ ಎಸ್.ಎಂ. ಕಾಂಬಳೆ, ತಹಸೀಲ್ದಾರ್ ಕ್ವಾರಂಟೈನ್ನಲ್ಲಿ ಇರುವ ಕಾರಣ ತಹಸೀಲ್ದಾರ್ ಕಚೇರಿಯಿಂದ ಸಭೆಗೆ ಯಾರೂ ಬಂದಿಲ್ಲ. ಪರಿಹಾರ ನೀಡಿದ ಬಗ್ಗೆ ಸಮಗ್ರ ಮಾಹಿತಿ ಪಡೆದು ನಿಮಗೆ ನೀಡಲಾಗುವುದು ಎಂದರು.