

ವಿಜಯವಾಣಿ ಸುದ್ದಿಜಾಲ ಉಡುಪಿ
ಕಾನೂನು ಉಲ್ಲಂಘಿಸದೆ ಸಂವಿಧಾನದ ಮೇಲೆ ನಂಬಿಕೆಯಿಟ್ಟು ಕಾರ್ಯನಿರ್ವಹಿಸಬೇಕು. ಕಟ್ಟುನಿಟ್ಟಾಗಿ ಕಾನೂನು ಪಾಲಿಸಬೇಕು. ಎಲ್ಲ ಸಮಸ್ಯೆಗಳಿಗೂ ಭಾರತದ ಸಂವಿಧಾನದಲ್ಲಿ ಪರಿಹಾರವಿದೆ. ವಕೀಲರು ಹಾಗೂ ನ್ಯಾಯಾಧೀಶರು ನಿತ್ಯವೂ ಕಾನೂನು ವಿದ್ಯಾರ್ಥಿಗಳಾಗಿದ್ದು, ಆ ನಿಟ್ಟಿನಲ್ಲಿ ಕಲಿಕೆ ನಿರಂತರವಾಗಿರಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ನಿಕಟಪೂರ್ವ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್. ಇಂದಿರೇಶ ಸಲಹೆ ನೀಡಿದರು.
ಉಡುಪಿ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಉಡುಪಿ ವಕೀಲರ ಸಂಘದ ವತಿಯಿಂದ ಆಗಸ್ಟ್ 16ರಂದು ಸಂಜೆ ಆಯೋಜಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲೆಯ ನೂತನ ಆಡಳಿತಾತ್ಮಕ ನ್ಯಾಯಮೂರ್ತಿಯಾಗಿ ನೇಮಕಗೊಂಡ ನ್ಯಾ.ಜೆ.ಎಂ. ಖಾಝಿ ಅವರ ಸ್ವಾಗತ ಹಾಗೂ ನಿಕಟಪೂರ್ವ ಆಡಳಿತಾತ್ಮಕ ನ್ಯಾಯಮೂರ್ತಿಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯಾ. ಜೆ.ಎಂ. ಖಾಝಿ ಮಾತನಾಡಿ, ನ್ಯಾಯಾಲಯಕ್ಕೆ ಬರುವ ಪ್ರತಿ ಪ್ರಕರಣದಲ್ಲೂ ಮಾನವೀಯ ಮೌಲ್ಯ ಅಡಗಿರುತ್ತದೆ. ಅದನ್ನು ನಾವು ಕಂಡುಕೊಳ್ಳಲು ಪ್ರಯತ್ನಿಸಬೇಕು. ಉತ್ತಮ ಅಭ್ಯಾಸ ಜೋಡಿಸಿಕೊಂಡು, ವಾಸ್ತವದ ದತ್ತಾಂಶದ ಆಧಾರದಲ್ಲಿ ವಾದ ಮಂಡಿಸಬೇಕು ಎಂದು ವಕೀಲರಿಗೆ ಕಿವಿಮಾತು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ ಎಸ್. ಗಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವಿಣಕುಮಾರ್ ಸ್ವಾಗತಿಸಿ, ಸಂಘದ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಸರ್ಕಾರಿ ವಕೀಲೆ ಮೇರಿ ಎ.ಆರ್. ಶ್ರೇಷ್ಠಾ ಅವರು ನೂತನ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಯ ಪರಿಚಯ ಮಾಡಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ನಾಗರಾಜ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ರಾಜೇಶ ಎ.ಆರ್. ವಂದಿಸಿದರು. ವಕೀಲ ರಾಜಶೇಖರ ಶ್ಯಾಮರಾಮ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ವಕೀಲರ ಸಂಘವು ನ್ಯಾಯಾಧೀಶರ ಪರೀಕ್ಷಾರ್ಥಿಗಳಿಗೆ ಸರಣಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ತನ್ನ ಸಂಘದಲ್ಲಿರುವ ವಕೀಲರು ನ್ಯಾಯಾಧೀಶರಾಗಬೇಕು ಎಂಬ ದೊಡ್ಡ ಮನಸ್ಸು ಈ ಸಂಘದ ಹಿರಿಯರಿಗಿದೆ. ಉಡುಪಿ ಸಂಘದ ಕಾರ್ಯ ಸಾಧನೆ ಶ್ಲಾಘನೀಯ. | ನ್ಯಾ. ಇ.ಎಸ್. ಇಂದಿರೇಶ. ಹೈಕೋರ್ಟ್ ನ್ಯಾಯಮೂರ್ತಿ