

ಕನಕಪುರ ಭ್ರಷ್ಟಾಚಾರ, ಸರ್ವಾಧಿಕಾರಿ ಧೋರಣೆ ಹಾಗೂ ಅಧಿಕಾರ ದುರುಪಯೋಗ ಸೇರಿ ಇನ್ನಿತರ ವಿಷಯಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಮೌಲ್ಯ ಕಳೆದುಕೊಳ್ಳುವಂತಾಗಿದೆ ಎಂದು ಸಾಹಿತಿಯೂ ಆದ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಬೇಸರಿಸಿದರು.
ನಗರದ ರೋಟರಿ ಭವನದಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಬೇಕಾದ ಪವಿತ್ರ ಸಂಸ್ಥೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಳಂಕಿತವಾಗಿರುವುದು ಸಾಹಿತಿಗಳು ಹಾಗೂ ಪ್ರಗತಿಪರರಲ್ಲಿ ಬೇಸರ ಮೂಡಿಸಿದೆ. ಪರಿಷತ್ತಿನ ಪಾರದರ್ಶಕತೆ ಹಾಗೂ ಘನತೆಯನ್ನು ಪುನಃ ಸ್ಥಾಪಿಸುವ ಅಗತ್ಯವಿದ್ದು, ಭ್ರಷ್ಟಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಇದೆ ಎಂದರು.
ನಿವೃತ್ತ ಅಧಿಕಾರಿಗಳು ಹಾಗೂ ಕಳಂಕಿತರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವಕಾಶ ನೀಡಬಾರದು. ನಾಡಿನ ಜ್ವಲಂತ ಸಮಸ್ಯೆಗಳಾದ ಆರ್ಥಿಕ, ಸಾಮಾಜಿಕ, ನದಿ, ನೆಲ, ಜಲ ಹಾಗೂ ಗಡಿ ವಿಚಾರಗಳಲ್ಲಿ ಕನ್ನಡಿಗರ ಪರವಾಗಿ ಪರಿಷತ್ತು ಧ್ವನಿ ಎತ್ತಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಜಾಣಗೆರೆ ವೆಂಕಟರಾಮಯ್ಯ ಮನವಿ ಮಾಡಿದರು.
ನಿವೃತ್ತ ಶಾಲಾ ಮುಖ್ಯ ಶಿಕ್ಷಕ ಮಹಮ್ಮದ್ ಯಾಕೂಬ್ ಪಾಷಾ, ರಂಗಭೂಮಿ ಕಲಾವಿದ ಎಂ.ಸಿ. ನಾಗರಾಜ್, ರೈತ ಸಂಘದ ಮುಖಂಡ ಸಂಪತ್ ಕುಮಾರ್, ಸಂಗೀತ ಶಿಕ್ಷಕಿ ವಿಜಯಶಂಕರ್, ಪತ್ರಕರ್ತ ರವಿಕುಮಾರ್ ಇದ್ದರು.
ಸ್ವಾಯತ್ತತೆ ಮಾಯ
ಪ್ರಜಾಪ್ರಭುತ್ವದ ಆಶಯಗಳನ್ನು ಒಳಗೊಂಡು ಕನ್ನಡಿಗರ ಘನತೆಯ ಸಂಸ್ಥೆಯಾಗಿ ರೂಪುಗೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ವಾಯತ್ತತೆ ಮಾಯವಾಗಿದ್ದು, ಹಣದ ಬಲದಿಂದ ಚುನಾವಣೆ ಗೆದ್ದು ಬರುವ ಮೂಲಕ ಪರಿಷತ್ತಿನ ಮೂಲ ಉದ್ದೇಶಗಳನ್ನು ವಿಫಲಗೊಳಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಹಿರಿಯ ಸಾಹಿತಿ ಪಿ.ಕೆ. ರಾಮೇಗೌಡ ಹೇಳಿದರು.
ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿ ಸೇರಿ ಹಲವು ಬೆಳವಣಿಗೆಗಳಿಂದ ಪರಿಷತ್ತಿನ ಘನತೆ ಮತ್ತು ಗೌರವಕ್ಕೆ ಧಕ್ಕೆ ಉಂಟಾಗಿದೆ. ಇಂತಹ ಬೆಳವಣಿಗೆಗಳಿಗೆ ಕಾರಣರಾದವರಿಗೆ ಸದಸ್ಯರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಸಾಹಿತ್ಯ ಪರಿಷತ್ತಿನ ಸದಸ್ಯರು ಎಚ್ಚೆತ್ತುಕೊಂಡು ಮುಂದಿನ ಚುನಾವಣೆಯಲ್ಲಿ ಪಕ್ಷಾಧಾರಿತ ರಾಜಕೀಯದಿಂದ ದೂರವಿರುವ, ಪ್ರಗತಿಪರ ಹಾಗೂ ನಾಡಪರ ಚಿಂತನೆಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಪರಿಷತ್ತಿಗೆ ಕಳಂಕ ತರುವಂತಹ ವ್ಯಕ್ತಿಗಳನ್ನು ದೂರವಿಟ್ಟು, ಸುಮಾರು 112 ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯದಂತೆ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯಗಳನ್ನು ಮರು ಸ್ಥಾಪಿಸುವ ಅಗತ್ಯವಿದೆ.
ಸಿದ್ದರಾಮಯ್ಯ ಹಿರಿಯ ವಿದ್ವಾಂಸ