

ಮೂಡುಬಿದಿರೆ: ಸಂಶೋಧನೆಯ ಮೂಲಕ ಸತ್ಯದ ಅನ್ವೇಷಣೆ ಸಾಧ್ಯ. ವಿದ್ಯಾರ್ಥಿಗಳು ಪೂರ್ಣಾವಧಿ ಸಂಶೋಧನೆ ಕೈಗೊಳ್ಳುವುದರಿಂದ ದೇಶ ಆತ್ಮನಿರ್ಭರದೆಡೆಗೆ ಸಾಗುತ್ತದೆ. ಸಂಶೋಧನೆ ಕೇವಲ ತಾಂತ್ರಿಕ ಪ್ರಯೋಗವಾಗದೆ ಆರೋಗ್ಯವಂತ ಸಮಾಜ ನಿರ್ಮಾಣ ಹಾಗೂ ನಿಸ್ವಾರ್ಥ ಸಮಾಜಮುಖಿ ಚಿಂತನೆಗಳನ್ನು ಬೆಳೆಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಳ್ವಾಸ್ ಟ್ರೆಡಿಷನಲ್ ಮೆಡಿಸಿನ್ ಆರ್ಕೈವ್(ಎಟಿಎಂಎ) ಆ್ಯಂಡ್ ರಿಸರ್ಚ್ ಸೆಂಟರ್ ಹಾಗೂ ಬೆಂಗಳೂರಿನ ಹಿಮಾಲಯ ವೆಲ್‌ನೆಸ್ ಕಂಪನಿ ಸಹಯೋಗದಲ್ಲಿ ಸೋಮವಾರ ‘ಸಂವೇದ 2022’ ಸಂಶೋಧನಾ ಕ್ರಮದ ಕುರಿತ ರಾಷ್ಟ್ರಮಟ್ಟದ ಸೆಮಿನಾರ್ ಉದ್ಘಾಟಿಸಿ ಮಾತನಾಡಿದರು.
ಹಿಮಾಲಯ ವೆಲ್‌ನೆಸ್ ಕಂಪನಿಯ ರಿಸರ್ಚ್ ಆ್ಯಂಡ್ ಡೆವೆಲೆಪ್‌ಮೆಂಟ್ ವಿಭಾಗದ ಹಿರಿಯ ಸಂಶೋಧನಾ ವಿಜ್ಞಾನಿ ಡಾ.ಅಶೋಕ್ ಬಿ.ಕೆ., ಶಿರಸಿಯ ಚೈತನ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ರಾಘವೇಂದ್ರ ಹೆಗ್ಡೆಕಟ್ಟೆ, ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿವಿಯ ಸಹಪ್ರಾಧ್ಯಾಪಕ ಶಿವಲಿಂಗಸರ್ಜ್ ದೇಸಾಯಿ, ಹಿಮಾಲಯ ವೆಲ್‌ನೆಸ್ ಕಂಪನಿಯ ರಿಸರ್ಚ್ ಆ್ಯಂಡ್ ಡೆವೆಲಪ್‌ಮೆಂಟ್ ವಿಭಾಗದ ಸಹ ಸಂಶೋಧನಾ ವಿಜ್ಞಾನಿ ಡಾ.ಸ್ವಾತಿ ಬಿ., ಜೈವಿಕ ಸಂಖ್ಯಾಶಾಸ್ತ್ರಜ್ಞ ಅಬ್ದುಲ್ ರೆಹಮಾನ್, ಅಬ್ದುಲ್ ಅಝೀಜ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಯುಜಿ, ಪಿಜಿ ಹಾಗೂ ಪಿಎಚ್.ಡಿ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಆಳ್ವಾಸ್ ಟ್ರೆಡಿಷನಲ್ ಮೆಡಿಸಿನ್ ಆರ್ಕೈವ್(ಎಟಿಎಂಎ) ಆ್ಯಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಡಾ.ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿದರು. ಸಹಪ್ರಾಧ್ಯಾಪಕಿ ಡಾ.ಗೀತಾ ಬಿ.ಮಾರ್ಕಂಡೆ ಕಾರ್ಯಕ್ರಮ ನಿರೂಪಿಸಿದರು. ಪಿಜಿ ಡೀನ್ ಡಾ.ರವಿಪ್ರಸಾದ್ ಹೆಗ್ಡೆ ವಂದಿಸಿದರು.